ಸಿನಿಮೀಯ ರೀತಿಯಲ್ಲಿ ಕಳ್ಳನನ್ನು ಹಿಡಿದ ಪೊಲೀಸ್ – ವೀಡಿಯೋ ವೈರಲ್…

72
firstsuddi

ಮಂಗಳೂರು : ಪೊಲೀಸ್ ಅಧಿಕಾರಿಯೋರ್ವರು ಸಿನಿಮೀಯ ರೀತಿಯಲ್ಲಿ ಕಳ್ಳನನ್ನು ಹಿಡಿದ ಘಟನೆ ನಗರದಲ್ಲಿ ನಡೆದಿದೆ. ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ನಿನ್ನೆ ಸಂಜೆ ಪೊಲೀಸ್ ಕಮಿಷನರ್ ಕಚೇರಿ ಮುಂಭಾಗ ಕಳ್ಳತನ ನಡೆದಿತ್ತು. ನಗರದ ನೆಹರು ಮೈದಾನದಲ್ಲಿ ಮಲಗಿದ್ದ ವ್ಯಕ್ತಿಯ ಮೊಬೈಲ್ ಹಣ ಕದಿಯಲಾಗಿತ್ತು. ಬಳಿಕ ತಕ್ಷಣವೇ ಇಬ್ಬರು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ಇತ್ತ ಮೊಬೈಲ್ ಕಳೆದುಕೊಂಡ ವ್ಯಕ್ತಿ ಹಾಗೂ ಸ್ಥಳೀಯರು ಎಚ್ಚೆತ್ತು ಓರ್ವ ಕಳ್ಳನನ್ನು ಓಡಿಸಿಕೊಂಡು ಹೋಗಿದ್ದಾರೆ. ಇದನ್ನು ನೋಡಿದ ಪೊಲೀಸ್ ಕಮಿಷನರ್, ಆರೋಪಿ ಹಿಡಿಯಲು ಸೂಚನೆ ನೀಡಿದ್ದಾರೆ. ಬಳಿಕ ಓರ್ವ ಆರೋಪಿಯನ್ನು ಪೊಲೀಸರು ಹಿಡಿದಿದ್ದಾರೆ. ಆತನಿಂದ ಪ್ಲಾನ್ ಮಾಡಿಸಿ ಇನ್ನಿಬ್ಬರನ್ನು ಬಲೆಗೆ ಕೆಡವಲು ಖಾಕಿ ಮುಂದಾಗಿತ್ತು.

ಆದರೆ ಖಾಕಿ ಪ್ಲಾನ್ ಗೊತ್ತಾಗಿ ಆರೋಪಿಗಳು ಎಸ್ಕೇಪ್ ಆಗಲು ಯತ್ನಿಸಿದರು. ಈ ವೇಳೆ ಎಎಸ್ಐ ವರುಣ್ ಒಂದು ಕಿಲೋಮೀಟರ್ ಓಡಿ ಹೋಗಿ ಸಿನಿಮೀಯ ರೀತಿಯಲ್ಲಿ ಆತನನ್ನು ಹಿಡಿದಿದ್ದಾರೆ. ಈ ಕಾರ್ಯಾಚರಣೆಯ ಸಂಪೂರ್ಣ ದೃಶ್ಯ ಸೆರೆಯಾಗಿದ್ದು, ಈ ವೀಡಿಯೋವನ್ನು ಕಮಿಷನರ್ ಶಶಿಕುಮಾರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಪೊಲೀಸ್ ವರುಣ್ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.