ಆರ್ಥಿಕ ಬೆಳವಣಿಗೆಗೆ ಪೂರಕವಾಗಿರುವ ಬಜೆಟ್ : ಸಿಎಂ ಬೊಮ್ಮಾಯಿ.

109
firstsuddi

ಬೆಂಗಳೂರು : ಕೊರೊನಾ ಕರಿಛಾಯೆಯಿಂದ ಆರ್ಥಿಕತೆ ಹಿಂಜರಿತ ಆಗಿತ್ತು. ದೂರದೃಷ್ಟಿ ಇರುವ ಆರ್ಥಿಕ ಬೆಳವಣಿಗೆಗೆ ಪೂರಕವಾಗಿರುವ ಹಾಗೂ ಜನಸಾಮಾನ್ಯರ ನಿರೀಕ್ಷೆಗೆ ತಕ್ಕ ರೀತಿಯಲ್ಲಿ ಒತ್ತು ಕೊಟ್ಟಿರುವ ಬಜೆಟ್ ಇದಾಗಿದೆ. ಆಡಳಿತದಲ್ಲಿ ಆಧುನಿಕತೆ ತರುವ ಬಜೆಟ್ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಗ್ರಾಮೀಣ ಭಾರತ ಸಬಲೀಕರಣ ಮಾಡಲು, ನಗರಗಳ ಅಭಿವೃದ್ಧಿಗೆ ಹೊಸತನ ಕೊಡಲು ಡಿಜಿಟೈಲೈಸೇಷನ್, ಸಾರಿಗೆಗೆ ದೊಡ್ಡ ಹಣ ನೀಡಲಾಗಿದೆ, ನಗರ, ಗ್ರಾಮೀಣ ಭಾಗಗಳ ಅಭಿವೃದ್ಧಿಗೆ ಸಮನಾದ ಒತ್ತು ನೀಡಿದ್ದು, ಬಜೆಟ್ ನಲ್ಲಿ ಆತ್ಮ ನಿರ್ಭರಕ್ಕೆ ಮತ್ತಷ್ಟು ಒತ್ತು ನೀಡಲಾಗಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ, ರೈಲ್ವೆಯಲ್ಲಿ ನಮ್ಮ ಯೋಜನೆಗಳಿವೆ. ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಉತ್ತೇಜನ ಕೊಡಲಾಗಿದ್ದು, ಅದರಿಂದ ಕರ್ನಾಟಕಕ್ಕೆ ಲಾಭವಾಗಲಿದೆ. ನಮ್ಮ ಮೆಟ್ರೋಗೆ ಹೆಚ್ಚಿನ ಅನುದಾನ ಸಿಗುವ ಸಾಧ್ಯತೆ ಹೆಚ್ಚಿದೆ. ಪ್ರವಾಸೋದ್ಯಮಕ್ಕೆ ಬಹಳ ದೊಡ್ಡ ಪ್ರಮಾಣದ ಅನುದಾನ ಸಿಕ್ಕಿದೆ. ನಮ್ಮಲ್ಲಿ ಪ್ರವಾಸೋದ್ಯಮ ವಲಯ ಜಾಸ್ತಿ ಇರುವುದರಿಂದ ನಮ್ಮ ರಾಜ್ಯಕ್ಕೆ ಹೆಚ್ಚಿನ ಅನುಕೂಲ ಆಗಲಿದೆ ಎಂದಿದ್ದಾರೆ.

ಕಾವೇರಿ, ಕೃಷ್ಣಾ, ಪೆನ್ನಾರ್ ನದಿ ಜೋಡಣೆ ಇದೆ. ಎಲ್ಲ ರಾಜ್ಯಗಳು ಇದರ ಡಿಪಿಆರ್ ಗೆ ಒಪ್ಪಿಕೊಂಡ ನಂತರ ಚಾಲನೆ ಕೊಡುವುದಾಗಿ ಹೇಳಿದ್ದಾರೆ. ಸದ್ಯ ಇದು ಚರ್ಚೆಯಲ್ಲಿದೆ. ಪೆನ್ನಾರ್ ಡಿಪಿಆರ್ ಮಾಡುವಾಗ ನಮ್ಮ ರಾಜ್ಯದ ಪಾಲನ್ನು ಸರಿಯಾದ ರೀತಿಯಲ್ಲಿ ನಿರ್ಧಾರ ಮಾಡಬೇಕು. ನಮ್ಮ ಪಾಲನ್ನು ನಮಗೆ ಒಪ್ಪಿತ ರೀತಿಯಲ್ಲಿ ನೀಡಲು ಸಮ್ಮತಿಸುವವರೆಗೂ ನಾವು ಡಿಪಿಆರ್ಗೆ ಒಪ್ಪಿಗೆ ಕೊಡುವುದಿಲ್ಲ. ಕೃಷ್ಣಾ, ಕಾವೇರಿ, ಪೆನ್ನಾರ್ನಲ್ಲಿ ನಮ್ಮ ಪಾಲು ಹೆಚ್ಚಾಗಬೇಕು. ನಮ್ಮ ರಾಜ್ಯದಲ್ಲಿ ಎಷ್ಟು ನೀರು ಉತ್ಪಾದನೆಯಾಗುತ್ತದೆ. ನಮ್ಮ ಅಗತ್ಯ ಏನಿದೆ ಎನ್ನುವುದನ್ನು ನಾವು ಪ್ರತಿಪಾದಿಸಿದ್ದು, ಅದಕ್ಕೆ ತಕ್ಕಂತೆ ಹಂಚಿಕೆಯಾಗಬೇಕು ಎಂದು ಹೇಳಿದರು.

ಸಣ್ಣ ಕೈಗಾರಿಕೆಗಳಿಗೆ 50,000 ಕೋಟಿ ಇದ್ದ ಅನುದಾನವನ್ನು ಐದು ಲಕ್ಷ ಕೋಟಿಗೆ ಹೆಚ್ಚಿಸಿದ್ದಾರೆ. ಸಣ್ಣ ಕೈಗಾರಿಕೆ, ಗುಡಿ ಕೈಗಾರಿಕೆಗಳಿಗೆ ಹೆಚ್ಚಿನ ಅನುದಾನ ಇಟ್ಟಿರುವುದರಿಂದ ಕರ್ನಾಟಕಕ್ಕೆ ಅನುಕೂಲವಾಗಲಿದೆ ಎಂದರು.