ಬೆಳಗಾವಿ : ನಮ್ಮ ನಾಗರಿಕರನ್ನ ಸುರಕ್ಷಿತವಾಗಿ ಕರೆತರೋದು ನಮ್ಮ ಆದ್ಯತೆ. ಇದು ಬಹುದೊಡ್ಡ ಚಾಲೆಂಜ್ ಕೂಡ ಹೌದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಇಂತಹ ವಿಷಮ ಪರಿಸ್ಥಿತಿಯಲ್ಲಿ ನಿನ್ನೆ ಎರಡು ವಿಮಾನಗಳು ಭಾರತಕ್ಕೆ ಬಂದಿವೆ. ನಮ್ಮ ಪ್ರಯತ್ನ ನಡೆಯುತ್ತಿದೆ. ಉಕ್ರೇನ್ ಅಕ್ಕಪಕ್ಕದ ದೇಶಗಳ ಜೊತೆ ಮಾತುಕತೆ ಮಾಡಲಾಗುತ್ತಿದೆ. ಅವರ ಸಹಯೋಗ ಸಹಕಾರ ಪಡೆದು ಕೆಲಸ ಮಾಡುತ್ತಿದ್ದೇವೆ. ದೆಹಲಿ, ಮುಂಬೈ ಯಾವುದಾದರೂ ಪ್ರಮುಖ ನಗರ ಆಯ್ಕೆ ಮಾಡಿದ್ರೆ ವಿದ್ಯಾರ್ಥಿಗಳನ್ನು ಕರೆತರಲು ಭಾರತ ಸರ್ಕಾರವೇ ಸಂಪೂರ್ಣ ವೆಚ್ಚ ಭರಿಸಲಿದೆ ಎಂದರು.
ಉಕ್ರೇನ್ ನಲ್ಲಿ ಈಗಿನ ವಾಸ್ತವಿಕ ಚಿತ್ರಣ, ಅಲ್ಲಿಂದ ಬರುವ ವಿಡಿಯೋಗಳು ಎಲ್ಲ ಸತ್ಯವೋ, ಸುಳ್ಳೋ ಎಂದು ವೆರಿಫಿಕೇಷನ್ ಆಗುತ್ತಿಲ್ಲ. ಪ್ರಧಾನಿ ನೇತೃತ್ವದಲ್ಲಿ ನಾವು ಸ್ಥಳಾಂತರ ಪ್ರಕ್ರಿಯೆಗೆ ಚಾಲನೆ ಕೊಟ್ಟಿದ್ದೇವೆ. ಇದು ಅತ್ಯಂತ ಕಠಿಣ ಮತ್ತು ಕ್ಲಿಷ್ಟಕರ ಸನ್ನಿವೇಶ. ಉಕ್ರೇನ್ ಜೊತೆಯೂ ನಮ್ಮ ಮಾತುಕತೆ ನಡೆಯುತ್ತಿದೆ. ನಾನು ಕೂಡ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್, ವಿದೇಶಾಂಗ ರಾಜ್ಯ ಸಚಿವರ ಜೊತೆ ಸಂಪರ್ಕದಲ್ಲಿದ್ದೇನೆ. ಕ್ಲಿಷ್ಟಕರ ಸನ್ನಿವೇಶ ಇರುವುದರಿಂದ ರಷ್ಯಾದ ಜೊತೆಯೂ ಮಾತನಾಡಬೇಕಾಗುತ್ತದೆ ಎಂದರು.










