ನಟ ಚೇತನ್ ವಿರುದ್ಧ ಚಾರ್ಜ್​​​​ಶೀಟ್ ಸಲ್ಲಿಕೆಗೆ ಅನುಮತಿ ಕೋರಿ ಸರ್ಕಾರಕ್ಕೆ ಪತ್ರ ಬರೆದ ಪೊಲೀಸರು.

98
firstsuddi

ಬೆಂಗಳೂರು : ಸ್ಯಾಂಡಲ್ ವುಡ್ ನಟ ಚೇತನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ಅನುಮತಿ ಕೋರಿ ಬಸವನಗುಡಿ ಠಾಣೆ ಪೊಲೀಸರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಬ್ರಾಹ್ಮಣ ಸಮುದಾಯದ ಬಗ್ಗೆ ನಿಂದನೆ ಹಾಗೂ ಹಿಂದೂ ಸಮುದಾಯದಲ್ಲಿ ವಿಷ ಬೀಜ ಬಿತ್ತುವ ಹಾಗೆ ಮಾತನಾಡಿದ್ದಾರೆ ಎನ್ನುವ ಆರೋಪದಡಿ ಚೇತನ್ ವಿರುದ್ಧ ಕಳೆದ ವರ್ಷ ಜೂನ್ 10ರಂದು ವಿಪ್ರ ಯುವ ವೇದಿಕೆಯ ಅಧ್ಯಕ್ಷ ಪವನ್ ಕುಮಾರ್ ಶರ್ಮಾ ಬಸವನಗುಡಿ ಠಾಣೆಗೆ ದೂರು ನೀಡಿದ್ದರು.

ದೂರಿನನ್ವಯ ಐಪಿಸಿ ಸೆಕ್ಷನ್ 153 (ಎರಡು ಸಮುದಾಯಗಳ ನಡುವೆ ಕೋಮು ಭಾವನೆ ಉಂಟುಮಾಡುವ ಮೂಲಕ ಗಲಭೆಗೆ ಪ್ರಚೋದನೆ) ನಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದರು. ವಿಚಾರಣೆಗೆ ಹಾಜರಾದಾಗ ಚೇತನ್ ಬೆಂಬಲಿಗರು ಠಾಣೆ ಬಳಿ ಜಮಾಯಿಸಿ ಕೋವಿಡ್ ನಿಯಮ ಉಲ್ಲಂಘಿಸಿರುವುದಾಗಿ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಹೀಗಾಗಿ ಐಪಿಸಿ ಸೆಕ್ಷನ್ 153ರ ಅಡಿ ದಾಖಲಾದ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆಗೆ ಸರ್ಕಾರದ ಅನುಮತಿ ಕೋರಿ ಪತ್ರ ಬರೆಯಲಾಗಿದೆ.

ನ್ಯಾಯಾಧೀಶರ ಬಗ್ಗೆ ಅವಹೇಳನ ರೀತಿಯಲ್ಲಿ ಟ್ವಿಟ್ ಮಾಡಿದ್ದ ಚೇತನ್, 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದರು. ನಂತರ ಅವರಿಗೆ ಜಾಮೀನು ಸಿಕ್ಕಿತ್ತು. ಇದೀಗ ಚಾರ್ಜ್ ಶೀಟ್ ಸಲ್ಲಿಕೆಗೆ ಅನುಮತಿ ದೊರೆತಲ್ಲಿ ಚೇತನ್ ಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.