ಬೆಂಗಳೂರು : ಇಂದು ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ಅವರ 47ನೇ ಹುಟ್ಟುಹಬ್ಬ. ಅಪ್ಪು ಹುಟ್ಟುಹಬ್ಬವನ್ನು ರಾಜ್ಯದೆಲ್ಲೆಡೆ ಅಭಿಮಾನಿಗಳು ಬಹಳ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಈ ನಡುವೆ ಅಪ್ಪುಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಶುಭಕೋರಿದ್ದಾರೆ.
ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಕರ್ನಾಟಕ ರತ್ನ, ಪ್ರೀತಿಯ ಅಪ್ಪು ದಿ. ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಪ್ರೀತಿ ಪೂರ್ವಕ ನಮನಗಳು. ಅತಿ ಚಿಕ್ಕ ವಯಸ್ಸಿನಲ್ಲಿ ನೀವು ಮಾಡಿದ ಸಾಧನೆ, ಗಳಿಸಿದ ಜನಪ್ರಿಯತೆ, ಮಾಡಿದ ಜನಸೇವೆಯನ್ನು ಬಣ್ಣಿಸಲು ಪದಗಳೇ ಸಾಲದು ಎಂದು ಬಸವರಾಜ ಬೊಮ್ಮಾಯಿ ಅವರು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಬಿ.ಎಸ್. ಯಡಿಯೂರಪ್ಪನವರು ಟ್ವೀಟ್ ಮಾಡಿ, ನಾಡಿನ ಪ್ರೀತಿ ಗಳಿಸಿದ್ದ ಅಪ್ರತಿಮ, ಸಹೃದಯಿ ಕಲಾವಿದ, ಕನ್ನಡಿಗರ ಕಣ್ಮಣಿ, ಡಾ.ರಾಜ್ ಕುಟುಂಬದ ಕುಡಿ, ಚಿಕ್ಕ ವಯಸ್ಸಿನಲ್ಲಿಯೇ ಅಪಾರವಾದದ್ದನ್ನು ಸಾಧಿಸಿ, ಅಕಾಲಿಕವಾಗಿ ನಮ್ಮನ್ನಗಲಿದ ಅಭಿಮಾನಿಗಳ ಪಾಲಿನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜನ್ಮದಿನದಂದು ಆ ಸಾಧಕ ಚೇತನಕ್ಕೆ ಅಭಿಮಾನಪೂರ್ವಕ ನಮನಗಳು ಎಂದು ತಿಳಿಸಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಅವರು, ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜನ್ಮದಿನದಂದು ಮರೆಯಲಾಗದ ಆ ತಾರೆಗೆ ನನ್ನ ಭಾವಪೂರ್ಣ ನಮನಗಳು. ಕನ್ನಡಿಗರ ಪಾಲಿಗೆ ಸದಾ ಸ್ಪೂರ್ತಿಯ ಚಿಲುಮೆ ಆಗಿರುವ ಅವರು ನಮ್ಮ ಪಾಲಿಗೆ ಸದಾ ಅಮರ ಎಂದು ಟ್ವೀಟ್ ಮಾಡಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ಟ್ವೀಟ್ ಮಾಡಿ, ಬೆಟ್ಟದ ಹೂವಾಗಿ ಅರಳಿದೆ. ಎರಡು ನಕ್ಷತ್ರಗಳಾಗಿ ಮಿಂಚಿದೆ. ಅರಸುವಾಗಿ ಚಂದನವನದ ಯುವರತ್ನನಾದೆ. ವೀರ ಕನ್ನಡಿಗನಾಗಿ ಪೃಥ್ವಿಯ ಮೈತ್ರಿ ತೊರೆದು ಪರಮಾತ್ಮನ ಮಿಲನವಾದೆ. ಅಪ್ಪು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅಪ್ಪು ನೆನಪು ಎಂದಿಗೂ ಅಮರ, ಅಪ್ಪು ಎಂದೆಂದಿಗೂ ಅಜರಾಮರ. ಹ್ಯಾಪಿ ಬರ್ತಡೇ ಅಪ್ಪು ಶುಭ ಕೋರಿದ್ದಾರೆ.










