ಹಿಜಾಬ್ ವಿವಾದ ಸಂಬಂಧ ಹೈಕೋರ್ಟ್ ತೀರ್ಪು ವಿರೋಧಿಸಿ ಮುಸ್ಲಿಂ ಸಂಘಟನೆಗಳು ಇಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ. ರಾಜ್ಯದಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ ನಡೆಯುತ್ತಿದ್ದು, ರಾಜ್ಯಾದ್ಯಂತ ವ್ಯಾಪಾರ ವಹಿವಾಟು ಬಂದ್ ಮಾಡಿ ಪ್ರತಿಭಟನೆ ಮಾಡಲಾಗುತ್ತಿದೆ. ಸ್ವಯಂಪ್ರೇರಿತವಾಗಿ ಅಂಗಡಿ ಮುಚ್ಚಿ ಮುಸ್ಲಿಮರು ಪ್ರತಿಭಟನೆ ಮಾಡುತ್ತಿದ್ದು, ಕೆಲ ಮುಸ್ಲಿಂ ಸಮುದಾಯದವರು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.
ಬೆಂಗಳೂರು: ಶಿವಾಜಿನಗರದಲ್ಲಿ ಕೆಲ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿವೆ. ಬೆಳಗಿನ ಜಾವ ಜನರಿಂದ ಕಿಕ್ಕಿರಿದು ತುಂಬಿರುತ್ತಿದ್ದ ಮಾರ್ಕೆಟ್ ಇಂದು ಬಂದ್ ಆಗಿವೆ. ಶಾಂತಿಯುತವಾಗಿ ಬಂದ್ ಆಚರಣೆ ಮಾಡುವಂತೆ ಮುಸ್ಲಿಂ ಸಂಘಟನೆ ಕರೆ ನೀಡಿದೆ.
ಬೆಳಗಾವಿ: ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ವಯಂಪ್ರೇರಿತವಾಗಿ ಅಂಗಡಿ ಬಂದ್ ಮಾಡಿದ ಮುಸ್ಲಿಂ ಸಮುದಾಯದವರು ಬಂದ್ ಗೆ ನೈತಿಕ ಬೆಂಬಲ ಸೂಚಿಸಿದರು. ಮುಸ್ಲಿಂ ವ್ಯಾಪಾರಿಗಳು ಹೆಚ್ಚಿರುವ ಖಂಜರ್ ಗಲ್ಲಿ, ಗಾಂಧಿನಗರ, ಉಜ್ವಲ್ ನಗರ, ಮಾಳಿ ಗಲ್ಲಿ, ಪೋರ್ಟ್ ರಸ್ತೆ, ಅಜಂ ನಗರ, ಆಜಾದ್ ನಗರಗಳಲ್ಲಿ ಅಂಗಡಿಗಳು ಬಂದ್ ಆಗಿದೆ. ಉಳಿದ ಸಮುದಾಯದವರ ಅಂಗಡಿ ಮುಂಗಟ್ಟುಗಳು ಕಾರ್ಯ ನಿರ್ವಹಿಸುತ್ತಿವೆ. ನಗರದಲ್ಲಿ ಅನಿರ್ದಿಷ್ಟಾವಧಿ ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ ಪ್ರತಿಭಟನಾ ಮೆರವಣಿಗೆ, ಪ್ರತಿಭಟನೆಗೆ ಅವಕಾಶ ನಿರಾಕರಿಸಲಾಗಿದೆ.
ತುಮಕೂರು: ಹೈಕೋರ್ಟ್ ತೀರ್ಪು ಸಂಬಂಧಿಸಿದಂತೆ ಮುಸ್ಲಿಂ ವ್ಯಾಪಾರಸ್ಥರು ನಗರದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಮಾಡಿದ್ದಾರೆ. ಕಾಲ್ ಟ್ಯಾಕ್ಸ್ ಸರ್ಕಲ್, ಬಿ.ಜಿ.ಪಾಳ್ಯ ಸರ್ಕಲ್, ಗುಬ್ಬಿ ಗೇಟ್, ಕುಣಿಗಲ್ ರಿಂಗ್ ರಸ್ತೆಗಳಲ್ಲಿನ ಪ್ರಮುಖ ಗ್ಯಾರೇಜ್, ಆಟೋ ಮೊಬೈಲ್ಸ್ ಅಂಗಡಿಗಳು ಬಂದ್ ಆಗಿದ್ದು, ಉಳಿದಂತೆ ಯಥಾಸ್ಥಿತಿಯಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದೆ.
ಚಿತ್ರದುರ್ಗ: ಹಿಜಾಬ್ ಬೆಂಬಲಿಸಿ ಬಂದ್ ಕರೆಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲ ಮುಸ್ಲಿಂ ವ್ಯಾಪಾರಿಗಳು ಅಂಗಡಿ ಬಂದ್ ಮಾಡಿ ಪೋಸ್ಟರ್ ಹಾಕಿದ್ದಾರೆ. ಕೆಲವೆಡೆ ಎಂದಿನಂತೆ ಅಂಗಡಿ ತೆರೆದಿರುವ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ನಿಷೇದಾಜ್ಞೆ ಜಾರಿ ಹಿನ್ನೆಲೆ ಪ್ರತಿಭಟನೆಗೆ ಅವಕಾಶವಿಲ್ಲ.










