ಪರಿಷತ್‍ನಲ್ಲಿ ಸದ್ದು ಮಾಡಿದ ಹಿಜಾಬ್ ತೀರ್ಪು ; ಬಿಜೆಪಿ-ಕಾಂಗ್ರೆಸ್ ನಡುವೆ ವಾಗ್ವಾದ…

63
firstsuddi

ಬೆಂಗಳೂರು : ಹಿಜಾಬ್ ಕುರಿತು ಹೈಕೋರ್ಟ್ ನೀಡಿದ ತೀರ್ಪಿನ ವಿಷಯ ವಿಧಾನ ಪರಿಷತ್ ನಲ್ಲಿ ಸದ್ದು ಮಾಡಿತು. ಈ ವಿಷಯವಾಗಿ ಬಿಜೆಪಿ-ಕಾಂಗ್ರೆಸ್ ನಾಯಕರ ನಡುವೆ ಗದ್ದಲಕ್ಕೆ ಕಾರಣವಾಯಿತು.

ಸಲೀಂ ಅಹಮದ್ ಮಾತನಾಡಿ, ಇಷ್ಟು ವರ್ಷ ಇಲ್ಲದ ಸಮಸ್ಯೆ ಈಗ ಏಕೆ ಬಂತು, ಸರ್ಕಾರದ ಆದೇಶವನ್ನೇ ಕೋರ್ಟ್ ಎತ್ತಿ ಹಿಡಿಯಿತು. ಇದು ಯಾಕೆ ಹೀಗಾಯಿತು. ಹಿಜಾಬ್ ಬುರ್ಖಾ ನೂರಾರು ವರ್ಷದಿಂದ ಇದೆ. ವಿವಾದ ಈಗ ಯಾಕಾಯಿತು ಎಂದು ಪ್ರಶ್ನಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಹೈಕೋರ್ಟ್ ತೀರ್ಪನ್ನು ಒಪ್ಪುತ್ತೀರಾ ಅಥವಾ ವಿರೋಧಿಸುತ್ತೀರಾ? ಎಂದು ಪ್ರಶ್ನಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಹರಿ ಪ್ರಸಾದ್, ಭಾಷಣದ ನಡುವೆ ನಮ್ಮ ಸದಸ್ಯರು ಸಮ್ಮತಿಸಲಿಲ್ಲ ಎಂದರೆ ಪ್ರತಿಪಕ್ಷ ನಾಯಕರಾಗಲಿ, ಸಭಾನಾಯಕರಿಗಾಗಲಿ ಮಧ್ಯದಲ್ಲಿ ಮಾತನಾಡಲು ಅವಕಾಶವಿಲ್ಲ ಎಂದರು.

ಮತ್ತೆ ಮಾತು ಮುಂದುವರೆಸಿದ ಸಲೀಂ ಅಹಮದ್, ಕೋರ್ಟ್ ತೀರ್ಪನ್ನು ಪ್ರತಿಯೊಬ್ಬರೂ ಒಪ್ಪಬೇಕು, ನಾವು ಒಪ್ಪುತ್ತೇವೆ. ಆದರೆ ಈ ಘಟನೆ ಯಾಕಾಯಿತು? ಕೇಸರಿ ಶಾಲು ಪದ್ಧತಿ ಮೊದಲು ಇತ್ತಾ? ಅಣ್ಣ-ತಮ್ಮಂದಿರ ರೀತಿ ಇದ್ದ ವಿದ್ಯಾರ್ಥಿಗಳು ಈಗ ಮುಖ ಕೊಟ್ಟು ಮಾತನಾಡದ ಪರಿಸ್ಥಿತಿ ಬಂದಿದೆ. ಇದಕ್ಕೆ ಸರ್ಕಾರವೇ ಕಾರಣವೆಂದು ಆರೋಪಿಸಿದರು.ಇದಕ್ಕೆ ಸಭಾ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯಿಸಿ, ನೆಮ್ಮದಿಯಿಂದ ಇದ್ದ ಮಕ್ಕಳು ನಿಮ್ಮ ಚಿತಾವಣೆಯಿಂದ ಹಿಜಾಬ್ ಧರಿಸಿ ಹೋದರು ಎಂದು ಕಾಂಗ್ರೆಸ್ ವಿರುದ್ಧ ನೇರ ಆರೋಪ ಮಾಡಿದರು. ಈ ವೇಳೆ ಕಾಂಗ್ರೆಸ್ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು.

ನಂತರ ಮಾತು ಮುಂದುವರೆಸಿದ ಸಲೀಂ ಅಹಮದ್, ಇಂದು ಕೋಮು ಸಾಮರಸ್ಯಕ್ಕೆ ಧಕ್ಕೆ ಬಂದಿದೆ. ಮಕ್ಕಳಲ್ಲಿ ಭೇಧಭಾವ ತಂದಿದ್ದಾರೆ. ಇದಕ್ಕೆ ಯಾರು ಕಾರಣ? ವಿದ್ಯಾರ್ಥಿಗಳಲ್ಲಿ ಕಂದಕ ತರುವ ಹಿಂದೂ, ಮುಸ್ಲಿಂ ಯಾವುದೇ ಸಂಘಟನೆ ಇರಲಿ ಬ್ಯಾನ್ ಮಾಡಲಿ ಎಂದಿದ್ದೇವೆ. ಈ ಸರ್ಕಾರಕ್ಕೆ ಧಮ್ ಇದೆಯಾ? ಶಿವಮೊಗ್ಗ ಹರ್ಷ ಕೊಲೆಗೆ 25 ಲಕ್ಷ ಕೊಟ್ಟರು, ಗದಗದಲ್ಲಿ ಮುಸ್ಲಿಂ ವ್ಯಕ್ತಿ ಕೊಲೆಗೆ ಪರಿಹಾರ ಕೊಟ್ಟಿಲ್ಲ, ಯಾಕೆ ಈ ತಾರತಮ್ಯ ಎಂದು ಪ್ರಶ್ನಿಸಿದರು. ಸದನದಲ್ಲಿ ಕೆಲಕಾಲ ಗದ್ದಲದ ವಾತಾವರಣ ಸೃಷ್ಟಿಯಾಯಿತು. ನಂತರ ಸಭಾಪತಿಗಳು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.