ಬೆಳಗಾವಿ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದ ಅದಿರು ಉದ್ಯಮಿ ಆರ್.ಎನ್. ನಾಯಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಮೊದಲ ಕೋಕಾ ಕೇಸ್ ನ ತೀರ್ಪು ಇಂದು ಪ್ರಕಟವಾಗಲಿದೆ. ಬೆಳಗಾವಿಯ ಕೋಕಾ ನ್ಯಾಯಾಲಯದಲ್ಲಿ ಇಂದು ಬೆಳಗ್ಗೆ 11ಕ್ಕೆ ಪ್ರಕಟವಾಗಲಿದ್ದು, ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ 13 ಪಾತಕಿಗಳ ಭವಿಷ್ಯ ನಿರ್ಧಾರವಾಗಲಿದೆ. ಹಿರಿಯ ವಕೀಲ ಕೆ.ಜಿ. ಪುರಾಣಿಕಮಠ ಸರ್ಕಾರದ ಪರ ವಕಾಲತ್ತು ವಹಿಸಿದ್ದಾರೆ.
ಶಿಕ್ಷಣ ಹಾಗೂ ಸಹಕಾರ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಆರ್.ಎನ್. ನಾಯಕ ಅದಿರು ಉದ್ಯಮಿ ಆಗಿದ್ದರು. ಈ ಕಾರಣಕ್ಕೆ ಬನ್ನಂಜೆ ರಾಜಾ ಆರ್.ಎನ್. ನಾಯಕ ಅವರನ್ನು ಟಾರ್ಗೆಟ್ ಮಾಡಿದ್ದ. ವಿದೇಶದಲ್ಲಿ ಕುಳಿತುಕೊಂಡೇ ಬನ್ನಂಜೆ ರಾಜಾ ನಾಯಕರ ಬಳಿ ಹಣಕ್ಕೆ ಬೇಡಿಕೆ ಇಡುತ್ತಿದ್ದ. 3 ಕೋಟಿ ರೂ. ಹಫ್ತಾ ನೀಡದಿದ್ದರೆ ಪ್ರಾಣ ತೆಗೆಯುವ ಬೆದರಿಕೆಯನ್ನು ಆರ್.ಎನ್. ನಾಯಕಗೆ ಹಾಕಲಾಗಿತ್ತು. ಈ ಸಂಬಂಧ ಆರ್.ಎನ್. ನಾಯಕ ಅಂಕೋಲಾ ಠಾಣೆಯಲ್ಲಿ ದೂರು ನೀಡಿದ್ದರು. ಹಫ್ತಾ ನೀಡದಿರುವುದಕ್ಕೆ 2013ರ ಡಿಸೆಂಬರ್ 21 ರಂದು ಆರ್.ಎನ್. ನಾಯಕ ಅವರನ್ನು ಹತ್ಯೆ ಮಾಡಲಾಗುತ್ತದೆ.










