ಚಿಕ್ಕಮಗಳೂರು : ಚಿಲ್ಲರೆ ಹಣಕ್ಕಾಗಿ ಆರಂಭವಾದ ಜಗಳ ಬಾರ್ ಕ್ಯಾಶಿಯರ್ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ. ಯಶ್ಪಾಲ್ (28) ಮೃತ ದುರ್ದೈವಿ.
ಯುಗಾದಿ ಹಬ್ಬದಂದು ಆರು ಮಂದಿ ಯುವಕರು ಸಖರಾಯಪಟ್ಟಣ ಸಮೀಪದ ಪ್ರವಾಸಿತಾಣ ಅಯ್ಯನಕೆರೆಗೆ ಹೋಗಿದ್ದರು. ಅಲ್ಲಿಂದ ಮದ್ಯದ ಖರೀದಿಗೆ ಸಖರಾಯಪಟ್ಟಣದ ಬಾರ್ ಗೆ ಬಂದಿದ್ದರು. ಬಿಯರ್ ಖರೀದಿಸಿದ ಬಳಿಕ ಚಿಲ್ಲರೆ ಹಣಕ್ಕಾಗಿ ಬಾರಿನ ಮತ್ತೊಬ್ಬ ಕ್ಯಾಶಿಯರ್ ಲಕ್ಷ್ಮೀಶ್ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಈ ವೇಳೆ, ಬಾರ್ ಮುಂದೆ ಇದ್ದ ಬೈಕನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಗಲಾಟೆ ಮಾಡಿದ್ದಾರೆ. ಬೈಕ್ ಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿರುವುದನ್ನು ಕಂಡು ಯಶ್ ಪಾಲ್ ಆಕ್ಷೇಪಿಸಿದ್ದಾರೆ.
ಇದರಿಂದ ಕೋಪಗೊಂಡ ಆರು ಜನರೂ ಯಶ್ ಪಾಲ್ ಅವರ ಎದೆ, ಹೊಟ್ಟೆ ಹಾಗೂ ಮುಖಕ್ಕೆ ಬಲವಾಗಿ ಹೊಡೆದು ಹೋಗಿದ್ದಾರೆ. ಕೆಲಸ ಮುಗಿಸಿ ಮನೆಗೆ ಹೋದ ಯಶ್ ಪಾಲ್ ತೀವ್ರ ಎದೆ ನೋವು ಎಂದು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ತೆರಳುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಇತ್ತ ಮೃತ ಯಶ್ ಪಾಲ್ ಮನೆಯವರು ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯಶ್ ಪಾಲ್ ಮೇಲೆ ಹಲ್ಲೆ ಮಾಡಿದ ಚಿಕ್ಕಮಗಳೂರಿನ ನರಿಗುಡ್ಡನಹಳ್ಳಿ ರಘು, ಕಲ್ಯಾಣ ನಗರದ ಯಶೀಶ್, ಮಂಜುನಾಥ್, ಹೌಸಿಂಗ್ ಬೋರ್ಡ್ ಪ್ರಕಾಶ್, ಬೀರೂರು-ಅಜ್ಜಂಪುರ ರಸ್ತೆಯ ಸಂಜಯ್, ತರೀಕೆರೆಯ ಶ್ರೀಧರ್ ಎಂಬ ಆರು ಆರೋಪಿಗಳನ್ನು ಬಂಧಿಸಿದ್ದಾರೆ.










