ಜ್ಯೋತಿರಾವ್ ಪುಲೆ ಪರಿಶ್ರಮದಿಂದ ಶೋಷಿತ ವರ್ಗದವರಿಂದು ಸಾಕ್ಷರರಾಗಲು ಸಾಧ್ಯವಾಗಿದೆ : ಕೆ.ಟಿ.ರಾಧಾಕೃಷ್ಣ.

70
firstsuddi

ಚಿಕ್ಕಮಗಳೂರು : ಅಕ್ಷರ ಕ್ರಾಂತಿಯ ಹರಿಕಾರ ಜ್ಯೋತಿರಾವ್ ಪುಲೆ ಅವರ ಪರಿಶ್ರಮ ಮತ್ತು ಕಾಳಜಿಯಿಂದಾಗಿ ಶೋಷಿತ ವರ್ಗದವರಿಂದು ಸಾಕ್ಷರರಾಗಲು ಸಾಧ್ಯವಾಗಿದೆ ಎಂದು ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಹೇಳಿದರು.

ನಗರದ ಬಿಎಸ್‍ಪಿ ಕಛೇರಿಯಲ್ಲಿ ಇಂದು ನಡೆದ ಅಕ್ಷರ ಕ್ರಾಂತಿಯ ಹರಿಕಾರ ಜ್ಯೋತಿರಾವ್ ಪುಲೆ ಅವರ 195ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೇಲ್ವರ್ಗದವರ ಷಡ್ಯಂತ್ರದಿಂದಾಗಿ ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ ದಲಿತರು, ಶೋಷಿತರಿಗೆ ಶಿಕ್ಷಣ ಮರೀಚಿಕೆಯಾಗಿತ್ತು ಮೇಲ್ವರ್ಗದ ಮಕ್ಕಳು ಮಾತ್ರ ಅಕ್ಷರ ಕಲಿಯಲು ಸಾಧ್ಯವಾಗಿತ್ತು ಎಂದರು.

ಶಿಕ್ಷಣ ಸಾರ್ವತ್ರಿಕವಾಗಬೇಕು, ಎಲ್ಲಾ ವರ್ಗಕ್ಕೂ ಸಿಗಬೇಕು ಎಂಬ ಜ್ಯೋತಿರಾವ್ ಪುಲೆ ಅವರ ಕೂಗು ಮತ್ತು ಪರಿಶ್ರಮಕ್ಕೆ ಮನುವಾದಿಗಳು ಹೆಜ್ಜೆ ಹೆಜ್ಜೆಗೂ ಅಡ್ಡಗಾಲು ಹಾಕುತ್ತಿದ್ದರು. ಅದಕ್ಕೆ ಬಗ್ಗದ ಜ್ಯೋತಿರಾವ್ ಪುಲೆ ಅವರು ತಮ್ಮ ಪತ್ನಿ ಸಾವಿತ್ರಿ ಬಾಯಿ ಪುಲೆ ಅವರಿಗೆ ಸ್ವತಃ ಶಿಕ್ಷಣ ನೀಡುವುದರ ಜೊತೆಗೆ ಹೊಸದಾಗಿ ತೆರೆದ ಹೆಣ್ಣು ಮಕ್ಕಳ ಶಾಲೆಗೆ ಅವರನ್ನು ಶಿಕ್ಷಕಿಯನ್ನಾಗಿ ಮಾಡಿದರು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಎಸ್‍ಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಯೋಜಕಿ ಕೆ.ಎಸ್.ಮಂಜುಳಾ ಜ್ಯೋತಿರಾವ್ ಪುಲೆ ಅವರ ಅಕ್ಷರ ಕ್ರಾಂತಿಯಿಂದಾಗಿ ಮಹಿಳೆಯರಿಂದು ಶಿಕ್ಷಣವಂತರಾಗಿ ಎಲ್ಲರಿಗೂ ಸರಿಸಮಾನವಾಗಿ ಬಾಳಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಬಿಎಸ್‍ಪಿ ನಗರ ಸಮಿತಿ ಖಜಾಂಚಿ ಹೆಚ್.ಆರ್.ನವೀನ್, ಪಕ್ಷದ ಪದಾಧಿಕಾರಿಗಳಾದ ಮಂಜಪ್ಪ, ಕೆ.ಆರ್.ಗಂಗಾಧರ್, ಸೋಮಶೇಖರ್, ಗಣೇಶ್, ಸುಕನ್ಯಾ, ವಸಂತ ಉಪಸ್ಥಿತರಿದ್ದರು.