ಕಲಬುರಗಿ : ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಪಿಎಸ್ಐ) ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿರುವ ಆರೋಪಗಳು ಕೇಳಿಬಂದಿದ್ದು, ಇದರ ಬೆನ್ನಲ್ಲೇ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು, ಸೇಡಂ ಪಟ್ಟಣದ ಅಭ್ಯರ್ಥಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಜಿಲ್ಲೆಯ ಠಾಣೆಯೊಂದರ ಎಎಸ್ ಐಯೊಬ್ಬರ ಪುತ್ರನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈತ ಮೂರು ಬಾರಿ ಪಿಎಸ್ಐ ಪರೀಕ್ಷೆ ಬರೆದಿದ್ದ. ಆದರೆ ಮೂರು ಬಾರಿಯೂ ಅರ್ಹತೆ ಪಡೆಯುವಲ್ಲಿ ವಿಫಲನಾಗಿದ್ದ. ವಯಸ್ಸು ಮೀರಿ ಹೋಗುತ್ತದೆ ಎಂಬ ಕಾರಣಕ್ಕಾಗಿ ಅಕ್ರಮವಾಗಿ ನೇಮಕಾತಿ ಪಡೆಯಲು ಮುಂದಾಗಿದ್ದ ಎಂದು ಶಂಕಿಸಲಾಗಿದೆ.
ಕಳೆದ ವರ್ಷ ಕಲಬುರಗಿಯ ಜ್ಞಾನಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದು, ಕೇವಲ 20 ಪ್ರಶ್ನೆಗಳಿಗೆ ಉತ್ತರ ಬರೆದಿದ್ದರು. ನಂತರ ಅಕ್ರಮವಾಗಿ ಒಎಂಆರ್ (ಆಪ್ಟಿಕಲ್ ಮಾರ್ಕ್ಸ್ ರೆಕಗ್ನಿಷನ್) ಹಾಳೆ ತರಸಿಕೊಂಡು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ 121 ಅಂಕ ಪಡೆಯುವ ಮೂಲಕ ಕಲ್ಯಾಣ ಕರ್ನಾಟಕ ಮೀಸಲು ಅನ್ವಯ 7ನೇ ರ್ಯಾಂಕ್ ಪಡೆದು ತೇರ್ಗಡೆ ಹೊಂದಿದ್ದ ಎನ್ನಲಾಗ್ತಿದೆ. ಅನುಮಾನಗೊಂಡ ಸಿಐಡಿ ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಿರೇಶನನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ವಿರೇಶ್ ಜೊತೆಗೆ ಇನ್ನೂ ಹಲವು ವಿದ್ಯಾರ್ಥಿಗಳು ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಸಿಐಡಿ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳ ಶೋಧ ಕಾರ್ಯ ಆರಂಭಿಸಿದ್ದಾರೆ. ಅಲ್ಲದೇ ಅಕ್ರಮ ನೇಮಕಾತಿಯಲ್ಲಿ ಪೊಲೀಸ್ ಅಧಿಕಾರಿಗಳು, ಪರೀಕ್ಷಾ ಕೊಠಡಿಯ ಮೇಲ್ವಿಚಾರಕರು ಸೇರಿದಂತೆ ಹಲವರು ಭಾಗಿಯಾಗಿರುವ ಶಂಕೆ ಕೂಡ ಇದೆ.










