ಕೋಲ್ಕತ್ತಾ : ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನಡೆದಿದ್ದು, ಬಾಲಕಿ ಸಾವನ್ನಪ್ಪಿದ ಬಳಿಕ ಸ್ಥಳೀಯ ಮುಖಂಡರ ಒತ್ತಡ ಮೇರೆಗೆ ಪೊಲೀಸರು ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸದೇ ಬಲವಂತವಾಗಿ ಅಂತ್ಯಕ್ರಿಯೆ ಮಾಡಿಸಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಪ್ರಕರಣ ನಡೆದು ನಾಲ್ಕು ದಿನಗಳು ಆದ ಬಳಿಕ ಸಂತ್ರಸ್ತೆ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ಸಂಬಂಧ ಆಡಳಿತ ಪಕ್ಷ ಟಿಎಂಸಿ ನಾಯಕನ ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಬಾಲಕಿಯ ಪೋಷಕರು ಮಾತನಾಡಿ, ನಮ್ಮ ಮಗಳು ಸ್ಥಳೀಯ ಟಿಎಂಸಿ ನಾಯಕನ ಮಗನ ನಿವಾಸದ ಪಾರ್ಟಿಯಿಂದ ಹಿಂದಿರುಗಿದ ನಂತರ ತೀವ್ರವಾಗಿ ರಕ್ತಸ್ರಾವವಾಗಿತ್ತು ಜೊತೆಗೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ನಾವು ಅವಳನ್ನು ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಅವಳು ಸಾವನ್ನಪ್ಪಿದ್ದಳು ಎಂದು ತಿಳಿಸಿದ್ದಾರೆ.
ಘಟನೆ ಸಂಬಂಧ ಸ್ನೇಹಿತರನ್ನು ವಿಚಾರಿಸಿದಾಗ ಹುಟ್ಟುಹಬ್ಬದ ಸಮಾರಂಭದಲ್ಲಿ ಆರೋಪಿ ಮತ್ತು ಆತನ ಸ್ನೇಹಿತರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವುದು ತಿಳಿದು ಬಂದಿದೆ ಎಂದು ಸಂತ್ರಸ್ತೆ ತಾಯಿ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಕತ್ತಾ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ನ್ಯಾಯಕ್ಕಾಗಿ ಆಗ್ರಹಿಸಲಾಗಿದೆ.










