ಹಿಂಸಾಚಾರ ಪೀಡಿತ ಪ್ರದೇಶ ಭೇಟಿಗೆ ಯತ್ನ – ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ…

67
firstsuddi

ಜೈಪುರ : ಹಿಂಸಾಚಾರ ಪೀಡಿತ ರಾಜಸ್ಥಾನದ ಕರೌಲಿಗೆ ಭೇಟಿ ನೀಡಲು ಯತ್ನಿಸಿದ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಮತ್ತು ಇತರ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತೇಜಸ್ವಿ ಸೂರ್ಯ ಈ ಹಿಂದೆ ತಮ್ಮ ಭೇಟಿ ಕುರಿತು ಟ್ವೀಟ್ ಮಾಡಿದ್ದರು. ಬಿಜೆಪಿ ಬೆಂಬಲಿಗರು ಅಲ್ಲಿಗೆ ತಲುಪಬೇಕು ಎಂದು ಕರೆ ನೀಡಿದ್ದರು.

ಗಲಭೆ ಪೀಡಿತ ಪ್ರದೇಶಕ್ಕೆ ಬಿಜೆಪಿ ಭೇಟಿ ನೀಡುವುದನ್ನು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ನಿರ್ಬಂಧಿಸಿದೆ ಎಂದು ಆರೋಪಿಸಿರುವ ಸೂರ್ಯ, ಅಲ್ಲಿಗೆ ತಲುಪುವವರೆಗೂ ನಾವು ಜಾಗ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಈ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜ್ಯ ಪೊಲೀಸರು ದೌಸಾ ಗಡಿಯಲ್ಲಿ ತೇಜಸ್ವಿ ಸೂರ್ಯರನ್ನು ತಡೆದಾಗ ಸತೀಶ್ ಪೂನಿಯಾ ಮತ್ತು ಹಲವಾರು ಬೆಂಬಲಿಗರೊಂದಿಗೆ ಇದ್ದರು.

ಕರೌಲಿಯಲ್ಲಿ ಏಪ್ರಿಲ್ 2 ರಂದು ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿತ್ತು. ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಪರಿಗಣಿಸಿ ಏಪ್ರಿಲ್ 12 ರವರೆಗೆ ಒಂದು ವಾರದವರೆಗೆ ಕರ್ಫ್ಯೂ ವಿಧಿಸಲಾಗಿತ್ತು. ನವ ಸಂವತ್ಸರದಂದು (ಹಿಂದೂ ಹೊಸ ವರ್ಷ) ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿ ಸಾಗುತ್ತಿದ್ದ ಬೈಕ್ ರ್ಯಾಲಿ ವೇಳೆ ಕಲ್ಲು ತೂರಾಟದ ಹಿನ್ನೆಲೆಯಲ್ಲಿ ಬೆಂಕಿ ಹಚ್ಚುವಿಕೆ ಮತ್ತು ವಿಧ್ವಂಸಕ ಕೃತ್ಯಗಳ ನಂತರ ಕರ್ಫ್ಯೂ ವಿಧಿಸಲಾಗಿತ್ತು. ಮೆರವಣಿಗೆಯು ಸೂಕ್ಷ್ಮ ಪ್ರದೇಶದಲ್ಲಿ ಹಾದು ಹೋಗುತ್ತಿದ್ದಾಗ ರ್ಯಾಲಿಯಲ್ಲಿದ್ದವರು ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ದರು. ಇದು ಗುಂಪು ದಾಳಿಗೆ ಕಾರಣವಾಗಿತ್ತು. ಈ ವೇಳೆ 8 ಪೊಲೀಸರು ಸೇರಿದಂತೆ 11 ಮಂದಿ ಗಾಯಗೊಂಡಿದ್ದರು.