ಮೇ ಎರಡನೇ ವಾರ ಎಸ್‍ಎಸ್‍ಎಲ್‍ಸಿ ಫಲಿತಾಂಶ : ಬಿ.ಸಿ. ನಾಗೇಶ್.

121
firstsuddi

ಬೆಂಗಳೂರು : ದ್ವಿತೀಯ ಪಿಯ ಪರೀಕ್ಷೆ ಸುಸೂತ್ರವಾಗಿ ನಡೆಯುತ್ತಿವೆ. ಈ ಬಾರಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿದೆ. ಎಸ್ಎಸ್ಎಲ್ಸಿ ಮೌಲ್ಯಮಾಪನ ಉತ್ತಮವಾಗಿ ನಡೆಯುತ್ತಿದೆ. ಹೀಗೆ ನಡೆದರೆ ಮೇ ಎರಡನೇ ವಾರದಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ನೀಡುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 16ರಿಂದ ಶಾಲೆಗಳು ಪ್ರಾರಂಭ ಆಗುತ್ತವೆ. ಜೂನ್, ಜುಲೈನಲ್ಲಿ 4ನೇ ಅಲೆ ಎಂದು ಹೇಳುತ್ತಿದ್ದಾರೆ. ಈಗಾಗಲೇ ಸಿಎಂ ಕೂಡಾ ಸಭೆ ಮಾಡಿದ್ದಾರೆ. ತಾಂತ್ರಿಕ ಸಲಹಾ ಸಮಿತಿ ನಮಗೆ ನೀಡುವ ನಿಯಮಗಳನ್ನು ನಾವು ಕಡ್ಡಾಯವಾಗಿ ಪಾಲನೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್ ಕಡ್ಡಾಯ ವಿಚಾರದ ಕುರಿತು ಮಾತನಾಡಿದ ಸಚಿವರು, ಆ ನಿಯಮ ರಾಜ್ಯ ಶಿಕ್ಷಣ ಕಾಯಿದೆಗೆ ವಿರುದ್ಧವಾಗಿದೆ. ಯಾವುದೇ ಶಿಕ್ಷಣ ಸಂಸ್ಥೆಯಾಗಲಿ ಧಾರ್ಮಿಕ ಗ್ರಂಥಗಳ ಅಳವಡಿಕೆಗೆ ಅವಕಾಶ ಇಲ್ಲ. ಶಿಕ್ಷಣ ಇಲಾಖೆ ಮೂಲಕ ನೋಟಿಸ್ ನೀಡಲಾಗಿದೆ. ಆ ಶಾಲೆ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಸರ್ಕಾರವೇ ಉಚಿತ ಲಸಿಕೆ ನೀಡುತ್ತಿದೆ. ಪರೀಕ್ಷೆಗಳು ನಡೆಯುತ್ತಿರುವುದರಿಂದ ಶಾಲೆಗಳಲ್ಲಿ ಲಸಿಕೆ ಕೊಡೊದು ಸದ್ಯಕ್ಕೆ ನಿಲ್ಲಿಸಲಾಗಿದೆ. ಪರೀಕ್ಷೆಗಳು ಮುಗಿದ ಬಳಿಕ ಶಾಲೆಗಳಲ್ಲಿ ಲಸಿಕೆ ಅಭಿಯಾನ ಮತ್ತೆ ಪ್ರಾರಂಭ ಮಾಡಲಾಗುತ್ತದೆ ಎಂದು ತಿಳಿಸಿದರು.