ಬೆಂಗಳೂರು : ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಸಚಿವ ಅಶ್ವಥ್ ನಾರಾಯಣ ವಿರುದ್ಧ ಕಾಂಗ್ರೆಸ್ ನವರು ಸುಖಾಸುಮ್ಮನೆ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ತಮ್ಮ ಪಕ್ಷದವರ ಬಣ್ಣ ಬಯಲಾಗಲಿದೆ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಹಿಟ್ ಆ್ಯಂಡ್ ರನ್ ಮಾಡುತ್ತಿದೆ. ಕಾಂಗ್ರೆಸ್‍ನವರ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರವಿಲ್ಲ. ಹಾಗಾಗಿ, ಅವರ ಮಾತಿಗೆ ಕಿಂಚಿತ್ತು ಬೆಲೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜವಾಬ್ದಾರಿಯುತ ಪ್ರತಿ ಪಕ್ಷವದರು ಬೇರೆಯವರ ಮೇಲೆ ಆರೋಪ ಮಾಡುವಾಗ ಸಾಕ್ಷಿ ಇರಬೇಕು ಎನ್ನುವುದು ಇವರಿಗೆ ತಿಳಿದಿಲ್ಲ. ಇವರು ಹಿಟ್-ಆ್ಯಂಡ್-ರನ್ ಮಾಡಲು ಹೊರಟಿದ್ದಾರೆ. ಇದು ನಡೆಯುವುದಿಲ್ಲ, ಅವರ ಕಾಲದಲ್ಲಿ ಸಾಕಷ್ಟು ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದವು. ಹಲವಾರು ಬಾರಿ ಪಿಎಸ್ ಐ, ಪಿಯುಸಿ ಎಲ್ಲಾ ಪ್ರಶ್ನೆ ಪತ್ರಿಕೆ ಹೊರಗೆ ಬಂದಿದ್ದವು. ಆಗ ಅವರು ಏನೂ ಕ್ರಮ ಕೈಗೊಂಡಿರಲಿಲ್ಲ. ಈಗ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ. ಬಂಧಿತರಲ್ಲಿ ಕೆಲವರು ಅವರ ಪಕ್ಷದವರು. ಅವರ ಮುಖಾಂತರ ಇವರ ಬಣ್ಣ ಬಯಲಾಗಲಿದೆ ಎಂದು ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದರು.
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಯಾವ ಯಾವ ದೂರುಗಳು ಬರುತ್ತವೆಯೋ?, ಯಾರು ಕೊಡುತ್ತಾರೋ ಅವೆಲ್ಲವನ್ನೂ ಪರಿಗಣಿಸುತ್ತೇವೆ. ಕೊಟ್ಟಿರುವ ದಾಖಲೆಗಳನ್ನು ಪರಿಶೀಲನೆ ಮಾಡುತ್ತೇವೆ. ಅದರ ತನಿಖೆಯನ್ನೂ ಮಾಡಿಸುತ್ತೇವೆ. ಅಕ್ರಮದಲ್ಲಿ ಸಹಕಾರ, ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದರೆ ಅಂತವರ ವಿರುದ್ಧ ಪ್ರಕರಣ ದಾಖಲು ಮಾಡುತ್ತೇವೆ. ನಾವು ಈ ಪ್ರಕರಣದ ತನಿಖೆ ವಿಚಾರದಲ್ಲಿ ಮುಕ್ತವಾಗಿದ್ದೇವೆ. ನಿಷ್ಪಕ್ಷಪಾತವಾಗಿ ನಿಷ್ಟುರವಾಗಿ ತನಿಖೆಯಾಗಬೇಕು ಎಂದು ಸೂಚಿಸಿದ್ದೇವೆ. ಹಲವಾರು ಅಧಿಕಾರಿಗಳ ವಿರುದ್ಧ ಕಾರ್ಯಾಚರಣೆ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.
ನಾಳೆ ರಾಗಿ ಖರೀದಿಗೆ ನೋಂದಣಿ ಪ್ರಕ್ರಿಯೆ ಆರಂಭಿಸಲು ಆದೇಶ ಕೊಟ್ಟಿದ್ದೇನೆ. ಎರಡು ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿಯಾಗಿ ರಾಗಿ ಖರೀದಿ ಮಾಡಲು ರಾಜ್ಯದ ಪ್ರಮುಖ ರಾಗಿ ಬೆಳೆಯುವ ಜಿಲ್ಲೆಗಳಲ್ಲಿ ಖರೀದಿಗೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ನಂತರ ಖರೀದಿ ಪ್ರಕ್ರಿಯೆ ಮಾಡಲಾಗುತ್ತದೆ ಎಂದರು.
ಬಜೆಟ್ ಅನುಷ್ಠಾನದ ಸಭೆಗಳನ್ನು ಮುಂದುವರಿಸಿದ್ದೇನೆ. ಹಲವಾರು ಸಲಹೆ-ಸೂಚನೆ ನೀಡಿ ಕಾಲಮಿತಿ ಕೊಟ್ಟಿದ್ದೇನೆ. ಕಟ್ಟುನಿಟ್ಟಾಗಿ ಬಜೆಟ್ ಅನುಷ್ಠಾನಕ್ಕೆ ತರಲು ಸೂಚನೆ ಕೊಟ್ಟಿರುವುದಾಗಿ ಸಿಎಂ ಮಾಹಿತಿ ನೀಡಿದರು.










