ಕಾಬೂಲ್ : ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ, ಇದೀಗ ಮಹಿಳೆಯರ ಚಾಲನಾ ಪರವಾನಗಿ ವಿತರಣೆ ರದ್ದು ಮಾಡಿದೆ.
ಕಾಬೂಲ್ ಮತ್ತು ಇತರ ಪ್ರಾಂತ್ಯಗಳಲ್ಲಿ ಮಹಿಳೆಯರಿಗೆ ಡ್ರೈವಿಂಗ್ ಲೈಸೆನ್ಸ್ ನೀಡುವುದನ್ನು ನಿಲ್ಲಿಸಲಾಗಿದೆ. ಕಾಬೂಲ್ ಸೇರಿದಂತೆ ದೇಶದ ಕೆಲವು ಪ್ರಮುಖ ನಗರಗಳಲ್ಲಿ ಮಹಿಳೆಯರು ವಾಹನ ಚಲಾಯಿಸುವ ಹಕ್ಕು ಹೊಂದಿದ್ದರು. ಆದರೆ ತಾಲಿಬಾನ್ ಈಗ ಇದರ ಮೇಲೆ ನಿರ್ಬಂಧ ವಿಧಿಸಿದ್ದು, ಚಾಲನಾ ಪರವಾನಗಿ ವಿತರಿಸುವುದನ್ನು ನಿಲ್ಲಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಮರಳಿದ ನಂತರ ಆಫ್ಘಾನಿಸ್ತಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಿರಂತರವಾಗಿ ನಡೆಯುತ್ತಿದೆ. ಜೊತೆಗೆ ಮಹಿಳೆಯರ ಹಕ್ಕುಗಳನ್ನೂ ಕಸಿಯಲಾಗುತ್ತಿದೆ. ಈಚೆಗಷ್ಟೇ ತಾಲಿಬಾನ್ ಆಡಳಿತವು, ಅಫ್ಘಾನಿಸ್ತಾನದಲ್ಲಿ 6ನೇ ತರಗತಿ ಮುಗಿಸಿದ ನಂತರ ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ನಿಷೇಧಿಸಿತು. ಈ ನಡೆ ವಿಶ್ವಾದ್ಯಂತ ಖಂಡನೆಗೆ ಕಾರಣವಾಗಿತ್ತು. ಶಿಕ್ಷಕರ ಕೊರತೆ ಇರುವುದರಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ತಾಲಿಬಾನ್ ಹೇಳಿತ್ತು.
ಅಫ್ಘಾನಿಸ್ತಾನ ಗಂಭೀರವಾದ ಮಾನವೀಯ ಬಿಕ್ಕಟ್ಟು ಎದುರಿಸುತ್ತಿದೆ. ವಿಶ್ವದಲ್ಲೇ ಅತಿ ಹೆಚ್ಚು ತುರ್ತು ಆಹಾರ ಅಭದ್ರತೆಯನ್ನು ಹೊಂದಿದೆ.










