ಬೆಂಗಳೂರು : ನಗರದಲ್ಲಿ ಮತ್ತೆ ಎಂಇಎಸ್ ಪುಂಡರು ಪುಂಡಾಟಿಕೆ ಮೆರೆದಿದ್ದಾರೆ. ಮದುವೆ ಸಮಾರಂಭದಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ವಧು-ವರ ಸೇರಿ ಸಂಬಂಧಿಕರ ಮೇಲೆ ಎಂಇಎಸ್ ಪುಂಡರು ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಧಾಮನೆ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ನಿನ್ನೆ ಧಾಮನೆ ಗ್ರಾಮದಲ್ಲಿ ಸೈಬಣ್ಣವರ್ ಕುಟುಂಬದ ಮದುವೆ ಸಮಾರಂಭವಿತ್ತು. ರಾತ್ರಿ ಬ್ಯಾಂಡ್ ಮೆರವಣಿಗೆ ಮೂಲಕ ವಧು-ವರನನ್ನು ಮನೆಗೆ ಕರೆದೊಯ್ಯುಲಾಗುತ್ತಿತ್ತು. ಈ ವೇಳೆ ಕನ್ನಡ ಧ್ವಜ ಹಿಡಿದು ‘ಕರುನಾಡೇ’ ಹಾಡಿಗೆ ಯುವಕರು ಕುಣಿದು ಕುಪ್ಪಳಿಸುತ್ತಿದ್ದರು. ಕನ್ನಡ ಧ್ಚಜ ಹಿಡಿದು ಕನ್ನಡ ಹಾಡಿಗೆ ಡ್ಯಾನ್ಸ್ ಮಾಡಿದ್ದಕ್ಕೆ ಎಂಇಎಸ್ ಪುಂಡರು ಕಿರಿಕ್ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ವಾಗ್ವಾದ ವಿಕೋಪಕ್ಕೆ ಹೋಗಿ ಎಂಇಎಸ್ ಪುಂಡರು ವರ ಸಿದ್ದು ಸೈಬಣ್ಣವರ್, ವಧು ರೇಷ್ಮಾ, ಸೇರಿ ಐವರ ಮೇಲೆ ಹಲ್ಲೆ ಮಾಡಿದ್ದಾರೆ.
ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ವ್ಯಕ್ತಿಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಅಜಯ್ ಯಳ್ಳೂರಕರ್, ಆಕಾಶ್ ಸೇರಿ 10 ಯುವಕರ ವಿರುದ್ಧ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.










