ಮುರುಘಾಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಸ್ವಾಮೀಜಿ ನೇಮಕ…

55
firstsuddi

ಚಿತ್ರದುರ್ಗ : ರಾಜಾಶ್ರಯದ ಐತಿಹಾಸಿಕ ಮಠಗಳಲ್ಲಿ ಚಿತ್ರದುರ್ಗದ ಶ್ರೀ ಮುರುಘಾ ರಾಜೇಂದ್ರ ಬೃಹನ್ಮಠವೂ ಒಂದಾಗಿದ್ದು, ಮುರುಘಾ ಮಠಕ್ಕೆ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಸ್ವಾಮೀಜಿ ಆಯ್ಕೆಯಾಗಿದ್ದಾರೆ.

ಮುರುಘಾ ಮಠದ ಶಿರಸಂಗಿ ಮಹಾಲಿಂಗ ಸ್ವಾಮಿ ಸಭಾಂಗಣದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಶರಣರು ಈ ಘೋಷಣೆ ಮಾಡಿದ್ದಾರೆ. ನೂತನ ಉತ್ತರಾಧಿಕಾರಿ ಬಸವಾದಿತ್ಯ ಸ್ವಾಮಿಗಳಿಗೆ ಹಣೆಗೆ ವಿಭೂತಿ ಇಟ್ಟು, ರುದ್ರಾಕ್ಷಿ ಮಾಲೆ ಹಾಕುವ ಮೂಲಕ ಘೋಷಣೆಯನ್ನು ಹೊರಡಿಸಿದರು. ಮುರುಘಾ ಶರಣರ ನಂತರ ಭಕ್ತರೆಲ್ಲರೂ ನೂತನ ಉತ್ತರಾಧಿಕಾರಿ ಶ್ರೀಗಳಿಗೆ ಹೂವಿನ ಸುರಿಮಳೆ ಸುರಿಸಿದರು.

ಚಿತ್ರದುರ್ಗ ತಾಲ್ಲೂಕಿನ ಹುಲ್ಲೂರು ಗ್ರಾಮದ ಚಂದ್ರಕಲಾ ಮತ್ತು ಶಿವಮೂರ್ತಯ್ಯ ದಂಪತಿಯ ಪುತ್ರ ಬಸವಾದಿತ್ಯರು ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದಾರೆ. ಇವರು ಹಿಂದಿನಿಂದಲೂ ಆಧ್ಯಾತ್ಮದಲ್ಲಿ ಆಸಕ್ತಿ ಹೊಂದಿದ್ದರು. ಬಸವಾದಿತ್ಯ ಬಸವ ಕೇಂದ್ರದ ಒಡನಾಡಿಯಾಗಿದ್ದು, ಅವರ ದೊಡ್ಡಮ್ಮನೊಂದಿಗೆ ಮುರುಘಾ ಮಠದ ಕಾರ್ಯಕ್ರಮಗಳಿಗೆ ಭಾಗಿಯಾಗ್ತಿದ್ದರು. ಇವರ ನಡೆನುಡಿ ಗಮನಿಸಿದ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರು ಅವರಿಗೆ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡಿಸಿದ್ದರು.

ನೂತನ ಉತ್ತರಾಧಿಕಾರಿ ಘೋಷಣೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಶರಣರು ಇದು ಆತುರದ ನಿರ್ಧಾರವಲ್ಲ. ಒಂದು ವರ್ಷದ ಹಿಂದೆಯೇ ಉತ್ತರಾಧಿಕಾರಿ ಘೋಷಣೆ ಬಗ್ಗೆ ನಿರ್ಧರಿಸಲಾಗಿತ್ತು ಎಂದರು. ಇನ್ನೂ ಮಠದ ನೂತನ ಉತ್ತರಾಧಿಕಾರಿಯಾದ ನಂತರ ಮಾತನಾಡಿದ ಬಸವಾಧಿತ್ಯ ಸ್ವಾಮಿಗಳು ನನಗೆ ಚಿಕ್ಕ ವಯಸ್ಸಿನಲ್ಲೇ ಮಠದ ಜವಾಬ್ದಾರಿ ನೀಡಿದ್ದಾರೆ. ಮಠವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯುಲಾಗುವುದು ಎಂದು ಹೇಳಿದರು.