ಮಸೀದಿ ಬಿಟ್ಟು ಕೊಡುತ್ತಾರೆ ಅನ್ನೋ ಕನಸು ಕಾಣಬೇಡಿ : ಅಬ್ದುಲ್ ಮಜೀದ್.

68
firstsuddi

ಮಂಗಳೂರು : ಮಳಲಿ ಮಸೀದಿಯ ಒಂದು ಹಿಡಿ ಮರಳು ಕೊಡಲಾರೆವು. ಮಸೀದಿ ಬಿಟ್ಟು ಕೊಡುತ್ತಾರೆ ಅನ್ನೋ ಕನಸು ಕಾಣಬೇಡಿ. ಈ ದೇಶ ನಮ್ಮದು, ಇದಕ್ಕಾಗಿ ರಕ್ತ ಹರಿಸಿದ್ದೇವೆ. ತಾಂಬೂಲ ಪ್ರಶ್ನೆ ಎಂದು ಬರುವವರನ್ನು ಪೊಲೀಸರು ಒದ್ದು ಒಳಗೆ ಹಾಕಬೇಕು ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ಗುಡುಗಿದ್ದಾರೆ.

ನಗರದ ಅಡ್ಯಾರ್ ಕಣ್ಣೂರು ಮೈದಾನದಲ್ಲಿ ಏರ್ಪಡಿಸಿದ್ದ ಬೃಹತ್ ಜನಾಧಿಕಾರ ಸಮಾವೇಶದಲ್ಲಿ ಮಾತನಾಡಿದ ಅವರು, ಸಂಘ ಪರಿವಾರದವರಿಗೆ ತಾಕತ್ತಿದ್ದರೆ ಬಳ್ಳಾರಿಯಲ್ಲಿ ನಿಮ್ಮದೇ ನಾಯಕ ಜನಾರ್ದನ ರೆಡ್ಡಿ 200 ವರ್ಷಗಳಷ್ಟು ಹಳೆಯದಾದ ಸುಗ್ಗುಲಮ್ಮ ದೇವಸ್ಥಾನವನ್ನು ಬಾಂಬ್ ಇಟ್ಟು ಒಡೆದು ಹಾಕಿ, ದೇವಿಯ ವಿಗ್ರಹ ನಾಶ ಮಾಡಿರುವ ಬಗ್ಗೆ ತಾಕತ್ತಿದ್ದರೆ ತಾಂಬೂಲ ಪ್ರಶ್ನೆ ಕೇಳಿ ಎಂದು ಸವಾಲು ಹಾಕಿದರು.

ತಾಂಬೂಲ ಪ್ರಶ್ನೆ ಎಂದು ಬರುವವರರನ್ನು ‘ಪೂಜಾ ಸ್ಥಳ ಕಾಯ್ದೆ 1991’ ಪ್ರಕಾರ ಮೂರು ವರ್ಷ ಜೈಲಿಗೆ ಹಾಕಬೇಕು. ಈ ಆ್ಯಕ್ಟ್ ಅನ್ನು ಪೊಲೀಸರು ಓದಿಲ್ವೇ?. ಆರ್ ಎಸ್ ಎಸ್ ನ ಆಟಕ್ಕೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಬೆದರಬಹುದು. ಆದರೆ, ನಿಮ್ಮ ಆಟಕ್ಕೆ ನಾವು ಹೆದರುವುದಿಲ್ಲ. ವ್ಯಾಪಾರ ಬಹಿಷ್ಕಾರ ಮಾಡಿ ಎಂದು ಕರೆ ನೀಡುವ ಸಂಘ ಪರಿವಾರದವರೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯೂಸಫ್ ಅಲಿ ಜೊತೆ 2 ಸಾವಿರ ಕೋಟಿ ಒಪ್ಪಂದ ಮಾಡಿದಾಗ ನಿಮಗೆ ನಾಚಿಕೆಯಾಗಿಲ್ಲವಾ? ಎಂದು ಪ್ರಶ್ನಿಸಿದರು.

ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ದೇಶದ ಜನರ ಪರವಾಗಿ ಕೆಲಸ ಮಾಡುತ್ತಿಲ್ಲ. ದೇಶವನ್ನು ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಮಾಡುವ ಮೊದಲು ಛಿದ್ರಗೊಳಿಸಲು ಹೊರಟಿದ್ದಾರೆ ಎಂದು ಮಜೀದ್ ಆರೋಪಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಮಳಲಿ ಮಸೀದಿ ನವೀಕರಣದ ವೇಳೆ ದೇವಾಲಯದ ಮಾದರಿ ರಚನೆ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ದೈವ ಸಾನಿಧ್ಯ ದೃಢೀಕರಣಕ್ಕಾಗಿ ರಾಮಾಂಜನೇಯ ಭಜನಾ ಮಂದಿರದಲ್ಲಿ ತಾಂಬೂಲ ಪ್ರಶ್ನೆ ನಡೆಸಲಾಗಿತ್ತು. ಕೇರಳದ ಪ್ರಖ್ಯಾತ ಜ್ಯೋತಿಷಿ ಜಿ.ಪಿ. ಗೋಪಾಲಕೃಷ್ಣ ಪಣಿಕ್ಕರ್ ನೇತೃತ್ವದಲ್ಲಿ ಪ್ರಶ್ನಾಚಿಂತನೆ ನಡೆದಿತ್ತು. ಈ ವೇಳೆ ಕೇರಳ ದೈವಜ್ಞರು ಸ್ಥಳದಲ್ಲಿ ಈ ಹಿಂದೆ ದೇವಾಲಯವಿತ್ತು, ವಿವಾದದಿಂದ ದೇವಾಲಯ ನಾಶಪಡಿಸಲಾಗಿದೆ, ದೇವಸ್ಥಾನ ಮರುಸ್ಥಾಪಿಸಬೇಕೆಂದು ಹೇಳಿದ್ದರು.