ಪಠ್ಯಪುಸ್ತಕ ಪರಿಷ್ಕರಣೆ – ಅನುಮತಿ ವಾಪಸ್ ಪಡೆದ ಸಾಹಿತಿಗಳಾದ ಮೂಡ್ನಾಕೂಡು, ಕಂಬಳಿ.

49
firstsuddi

ಬೆಂಗಳೂರು : ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ಸಾಹಿತಿಗಳ ಹೋರಾಟ ಮುಂದುವರೆದಿದೆ. ಇದೀಗ ಸಾಹಿತಿ ಮೂಡ್ನಕೂಡು ಚಿನ್ನಸ್ವಾಮಿ ಹಾಗೂ ಈರಪ್ಪ ಎಂ ಕಂಬಳಿ ಅವರು ಬರೆದಿರುವ ಪ್ರಬಂಧ ಹಾಗೂ ಕವಿತೆಯನ್ನು ಪ್ರಕಟಿಸಲು ಅನುಮತಿಯನ್ನು ವಾಪಸ್ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಶಿಕ್ಷಣ ಸಚಿವ ನಾಗೇಶ್ ಅವರಿಗೆ ಪತ್ರ ಬರೆದಿರುವ ಮೂಡ್ನಕೂಡು ಚಿನ್ನಸ್ವಾಮಿ ಅವರು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಸಮಿತಿಯನ್ನು ನೇಮಿಸಿ ಶಾಲಾ ಪಠ್ಯಗಳನ್ನು ಕೇಸರಿಕರಣಗೊಳಿಸುತ್ತಿರುವ ಬಗ್ಗೆ ಕನ್ನಡ ಸಾರಸ್ವತ ಲೋಕ ವಿಚಲಿತಗೊಂಡಿದೆ. ಬಸವಣ್ಣನವರ ಕುರಿತು ತಪ್ಪು ಮಾಹಿತಿ ನೀಡುವುದು, ಕುವೆಂಪು ಅವರನ್ನ ಅವಮಾನಿಸುವುದು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಮಾಡುವ ಅಪಚಾರ. ಜಾತಿ ವ್ಯವಸ್ಥೆಯಿಂದ ಕಲುಷಿತಗೊಂಡಿರುವ ನಮ್ಮ ಸಮಾಜವನ್ನ ಜಾತ್ಯಾತೀತಗೊಳಿಸಿದ್ರೆ ಮಾತ್ರ ಸರಿಪಡಿಸಲು ಸಾಧ್ಯ.

ಸ್ವಾಸ್ಥ್ಯ ಸಮಾಜಕ್ಕಾಗಿ ಮುಂದಿನ ಪೀಳಿಗೆಯನ್ನು ತಯಾರು ಮಾಡುವ ಶಿಕ್ಷಣಕ್ಷೇತ್ರ ಅನವಶ್ಯಕ ವಿದ್ಯಮಾನಗಳಿಂದ ದಾಳಿಗೊಳಗಾಗುತ್ತಿರುವುದು ವಿಷಾದನೀಯ. ಪ್ರಗತಿಪರತೆಯ ಪ್ರತಿಪಾದಿಸುವವರನ್ನು ಎಡಪಂಥೀಯರು ಎಂದು ದೂರುವುದು ಹಾಗೂ ದೂರ ಮಾಡುವುದು ಆರೋಗ್ಯಕರ ಸಮಾಜದ ಲಕ್ಷಣವಲ್ಲ. ಈ ಹಿನ್ನೆಲೆಯಲ್ಲಿ 5ನೇ ತರಗತಿಗೆ ಪಠ್ಯವಾಗಿರುವ ನನ್ನ ಕವಿತೆಗೆ ಎಂಬ ಕವಿತೆಗಾಗಿ ನೀಡಿರುವ ನನ್ನ ಅನುಮತಿಯನ್ನ ಹಿಂಪಡೆಯುತ್ತಿದ್ದೇನೆ ಅಂತಾ ತಿಳಿಸಿದ್ದಾರೆ.

ಅದೇ ರೀತಿ ಈರಪ್ಪ ಎಂ. ಕಂಬಳಿ ಅವರು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದು, ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಅನಾರೋಗ್ಯಕರ ಬೆಳವಣಿಗೆಯನ್ನು ಕಂಡು ನನಗೆ ತೀವ್ರ ಅಸಮಾಧಾನವಾಗಿದೆ. ಆ ಕಾರಣಕ್ಕೆ ಕಳೆದ ಸಾಲಿನಲ್ಲಿ 10ನೇ ತರಗತಿಯ ನುಡಿ ಕನ್ನಡ ತೃತೀಯ ಭಾಷಾ ಕನ್ನಡ ಪಠ್ಯಪುಸ್ತಕದಲ್ಲಿರುವ “ಹೀಗೊಂದು ಟಾಪ್ ಪ್ರಯಾಣ” ಶೀರ್ಷಿಕೆಯ ನನ್ನ ಲಲಿತ ಪ್ರಬಂಧ ಮುಂದುವರೆಸಬಾರದು. ಈ ಹಿಂದೆ ನೀಡಿದ್ದ ಅನುಮತಿಯನ್ನ ವಾಪಸ್ ಪಡೆದಿದ್ದೇನೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಕೈಮೀರಿ ಹೋಗುತ್ತಿದೆ. ಇತ್ತೀಚೆಗಷ್ಟೇ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯನ್ನು ವಿರೋಧಿಸಿ ದೇವನೂರ ಮಹಾದೇವ, ಜಿ. ರಾಮಕೃಷ್ಣ, ಎಸ್.ಜಿ ಸಿದ್ದರಾಮಯ್ಯ ಹಾಗೂ ನಾಡೋಜ ಡಾ. ಹಂಪ ನಾಗರಾಜಯ್ಯ ಅವರು ತಾವು ನೀಡಿದ್ದ ಅನುಮತಿಯನ್ನು ಹಿಂಪಡೆದಿದ್ದರು.