ಚಿಕ್ಕಮಗಳೂರು : ಕಡೂರು ತಾಲ್ಲೂಕಿನ ಇತಿಹಾಸ ಪ್ರಸಿದ್ದ ಮದಗದ ಕೆರೆಯ ತೂಬು ನಿರ್ಮಾಣ ಕಾಮಗಾರಿ ಕಳಪೆಯಾಗಿದ್ದು ಸಂಬಂಧಪಟ್ಟವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಅಪರ ಜಿಲ್ಲಾಧಿಕಾರಿ ರೂಪ ಅವರನ್ನು ಇಂದು ಭೇಟಿ ಮಾಡಿದ ಸಂಘಟನೆಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಜಿಲ್ಲೆಯ ಬಯಲುಸೀಮೆಯ ರೈತರ ಜೀವನಾಡಿಯಾದ ಐತಿಹಾಸಿಕ ಮದಗದ ಕೆರೆಯ ತೂಬು ಎತ್ತರಗೊಳಿಸಲು ಸರ್ಕಾರ 2.5 ಕೋಟಿ ರೂ ಮಂಜೂರು ಮಾಡಿದ್ದು, ಕಳೆದ 4 ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ ಎಂದರು.
ತೂಬು ನಿರ್ಮಾಣ ಕಾಮಗಾರಿಯನ್ನು ಆಮೆಗತಿಯಲ್ಲಿ ಬೇಕಾಬಿಟ್ಟಿ ಮಾಡಲಾಗುತ್ತಿದೆ, ವರ್ಷದಲ್ಲಿ ಕೇವಲ ಒಂದೆರಡು ತಿಂಗಳು ಮಾತ್ರ ಕಾಮಗಾರಿ ನಡೆಸಲಾಗುತ್ತಿದ್ದು, ಅದೂ ಕೂಡ ಅತ್ಯಂತ ಕಳಪೆಯಾಗಿದೆ ಎಂದು ಹೇಳಿದರು.
ತೂಬು ನಿರ್ಮಾಣಕ್ಕೆ ಕಬ್ಬಿಣ ಬಳಸುವ ಜಾಗದಲ್ಲಿ ಮರ ಬಳಸಲಾಗುತ್ತಿದೆ, ಮದಗದ ಕೆರೆ ಬಯಲುಸೀಮೆಯ ಸಾವಿರಾರು ಎಕರೆ ಪ್ರದೇಶಕ್ಕೆ ನೀರುಣಿಸುವುದರ ಜೊತೆಗೆ ಕಡೂರು ಮತ್ತು ಬೀರೂರು ಪಟ್ಟಣಕ್ಕೆ ಕುಡಿಯುವ ನೀರನ್ನು ಒದಗಿಸುತ್ತಿದೆ. ಪ್ರತಿವರ್ಷ ಕಾಮಗಾರಿಯ ಹೆಸರಿನಲ್ಲಿ ಕೆರೆಯ ನೀರನ್ನು ಖಾಲಿ ಮಾಡುತ್ತಿರುವುದರಿಂದ ಸುತ್ತಮುತ್ತಲ ಗ್ರಾಮಗಳ ಜನ, ಜಾನುವಾರು ಮತ್ತು ಕೃಷಿಗೆ ನೀರಿಲ್ಲದಂತಾಗಿದೆ ಎಂದು ಆರೋಪಿಸಿದರು.
ಮುಂದಾಗಬಹುದಾದ ಅನಾಹುತವನ್ನು ತಪ್ಪಿಸುವ ನಿಟ್ಟಿನಲ್ಲಿ ಕೂಡಲೇ ಕಳಪೆ ಕಾಮಗಾರಿಯನ್ನು ನಿಲ್ಲಿಸಬೇಕು, ಕಳಪೆ ಕಾಮಗಾರಿಯ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಬೇಕು, ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸುವುದರ ಜೊತೆಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆಯ ರಾಜ್ಯಾಧ್ಯಕ್ಷ ಸೋಮಾನಾಯಕ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಉಪಾಧ್ಯಕ್ಷ ಯೂಸೂಫ್, ತಾಲ್ಲೂಕು ಅಧ್ಯಕ್ಷ ಸಮೀರ್, ಕಾರ್ಯಕರ್ತರಾದ ಕೆ.ಎಸ್.ಪ್ರಕಾಶ್, ಚಂದ್ರು, ಮುಳ್ಳೇಶ್ ಹಾಜರಿದ್ದರು.










