ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಗೆಲುವು, ಆಡಳಿತ ಪಕ್ಷಕ್ಕೆ ಶಾಕ್!

61
firstsuddi

ಮುಂಬೈ : ಮಹಾರಾಷ್ಟ್ರದಲ್ಲಿ ರಾಜ್ಯಸಭಾ ಚುನಾವಣೆಯ ಮತ ಎಣಿಕೆಯ ವೇಳೆ ಭಾರೀ ಹೈಡ್ರಾಮಾ ನಡೆದಿದ್ದು, ಇಂದು ಬೆಳಗ್ಗೆ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಮೂರು ಸ್ಥಾನ ಗೆದ್ದರೆ, ಮೈತ್ರಿ ಸರ್ಕಾರದ ಮೂರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಆಡಳಿತರೂಢ ಮಹಾ ವಿಕಾಸ್ ಅಘಾಡಿಗೆ ಬಿಗ್ ಶಾಕ್ ಆಗಿದೆ. 

ಕೇಂದ್ರ ಸಚಿವ ಪಿಯೂಷ್ ಗೋಯಲ್, ಎನ್ ಸಿಪಿ ನಾಯಕ ಪ್ರಫುಲ್ ಪಟೇಲ್, ಶಿವಸೇನೆಯ ಸಂಜಯ್ ರಾವತ್, ಕಾಂಗ್ರೆಸ್ ನಾಯಕ ಇಮ್ರಾನ್ ಪ್ರತಾಪ್‌ಗರ್ಹಿ, ಬಿಜೆಪಿಯ ಅನಿಲ್ ಬೋಂಡೆ ಮತ್ತು ಧನಂಜಯ್ ಮಹಾದಿಕ್ ಆಯ್ಕೆ ಆಗಿದ್ದಾರೆ.

ಒಟ್ಟು 285 ಮಂದಿ ಮತ ಚಲಾವಣೆ ಮಾಡಿದ್ದರು. ಆದರೆ ಶಿವಸೇನೆಯ ಶಾಸಕ ಸುಹಾಸ್ ಕಾಂಡೆ ಮತದಾನದ ವೇಳೆ ಚುನಾವಣಾ ನಿಯಮವನ್ನು ಉಲ್ಲಂಘಿಸಿದ್ದ ಹಿನ್ನೆಲೆಯಲ್ಲಿ ಅವರ ಮತವನ್ನು ತಿರಸ್ಕರಿಸಲಾಯಿತು. ಮಧ್ಯರಾತ್ರಿ 1 ಗಂಟೆಯ ವೇಳೆ ಆಯೋಗ ಈ ನಿರ್ಧಾರವನ್ನು ತೆಗೆದುಕೊಂಡಿದ್ದರಿಂದ ಮತ ಎಣಿಕೆ ತಡವಾಗಿ ಆರಂಭವಾಗಿತ್ತು.

ಬಿಜೆಪಿಯು 106 ಶಾಸಕರನ್ನು ಹೊಂದಿದ್ದು, ಒಟ್ಟು ಮೂವರು ಅಭ್ಯರ್ಥಿಗಳನ್ನ ಕಣಕ್ಕಿಳಿಸಿತ್ತು.ಇದರಲ್ಲಿ ಇಬ್ಬರ ಜಯ ಸುಲಭವಾಗಿತ್ತು. ಆದರೆ, ತನ್ನ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಲು ಇನ್ನೂ 17 ಮತಗಳ ಅಗತ್ಯವಿತ್ತು. ಇನ್ನು ಆಡಳಿತ ಪಕ್ಷ ಮಹಾ ವಿಕಾಸ್ ಅಘಾಡಿ 150 ಸದಸ್ಯರನ್ನ ಹೊಂದಿದ್ದು, ನಾಲ್ವರು ಅಭ್ಯರ್ಥಿಗಳನ್ನ ಕಣಕ್ಕಿಳಿಸಿತ್ತು. ಹೀಗಾಗಿ, ನಾಲ್ಕನೇ ಅಭ್ಯರ್ಥಿ ಗೆಲ್ಲಿಸಲು 14 ಮತಗಳ ಅಗತ್ಯವಿತ್ತು. ಈ ಚುನಾವಣೆಯಲ್ಲಿ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಹೆಣೆದ ರಣತಂತ್ರ ಯಶಸ್ವಿಯಾಗಿದ್ದು, ಪಕ್ಷೇತರ ಶಾಸಕರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಹೀಗಾಗಿ ಬಿಜೆಪಿ ಗೆಲುವು ಸಾಧಿಸಿದ್ದು, ಆಡಳಿತ ರೂಢ ಮಹಾ ವಿಕಾಸ್ ಅಘಾಡಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ.