ಚಿಕ್ಕಮಗಳೂರು : ಕಾಫಿನಾಡಿನಲ್ಲೂ ಉತ್ತರ ಪ್ರದೇಶ ಮಾದರಿಯಲ್ಲೇ ಅಕ್ರಮ ಗೋಮಾಂಸ ಅಡ್ಡೆಗಳ ಮೇಲೆ ಬುಲ್ಡೋಜರ್ ಪ್ರಯೋಗ ನಡೆಯುತ್ತಿದೆ. ಈಗಾಗಲೇ ನಗರಸಭೆ ಅಕ್ರಮ ಗೋಮಾಂಸ ಮಾರಾಟ ಮಾಡುವ ಮನೆ, ಗೋಮಾಂಸ ಅಡ್ಡೆಗಳಿಗೆ ನೋಟಿಸ್ ಅಂಟಿಸಿದ್ದು, ನಿರ್ದಾಕ್ಷಣ್ಯ ಕ್ರಮದ ಎಚ್ಚರಿಕೆ ನೀಡಿದೆ. ಸ್ಫೋಟಕ, ಮಾದಕ ವಸ್ತು ಸೇರಿದಂತೆ ಗೋಹತ್ಯೆ ಮಾಡಿದರೂ ಕಟ್ಟಡ ನೆಲಸಮ ಮಾಡುವುದಾಗಿ ತಿಳಿಸಿದೆ.
ಕಳೆದ ವಾರ ನಗರಸಭೆ ಎಂದಿನಂತೆ ತಮಿಳು ಕಾಲೋನಿ ಹಾಗೂ ಷರೀಫ್ ಗಲ್ಲಿಯಲ್ಲಿ ಅಲ್ಲಲ್ಲೇ ಬೆಳೆದಿದ್ದ ಗಿಡ-ಘಂಟೆಗಳ ತೆರವಿಗೆ ಮುಂದಾಗಿತ್ತು. ಆಗ ತಮಿಳು ಕಾಲೋನಿಯ ಜನನಿಬಿಡ ಪ್ರದೇಶದಲ್ಲಿದ್ದ ಅಕ್ರಮ ಗೋಮಾಂಸ ಶೆಡ್ ಕಣ್ಣಿಗೆ ಬಿದ್ದಿದೆ. ಅಧಿಕಾರಿಗಳು ಸ್ಥಳಕ್ಕೆ ಹೋದಾಗ ಗೋಮಾಂಸವೂ ಅಲ್ಲಿ ಇತ್ತು ಎಂದು ಹೇಳಲಾಗಿದೆ. ಕೂಡಲೇ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಹಾಗೂ ನಗರಸಭೆ ಆಯುಕ್ತ ಬಸವರಾಜ್ ನಗರ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಗೋಮಾಂಸ ಮಳಿಗೆಯನ್ನು ಜೆಸಿಬಿಯಿಂದ ಧ್ವಂಸ ಮಾಡಿದ್ದಾರೆ.










