ಅಗ್ನಿಪಥ್ ಪ್ರತಿಭಟನೆ ನಡುವೆಯೇ ಅಗ್ನಿವೀರರಿಗೆ ಉದ್ಯೋಗದ ಆಫರ್ ನೀಡಿದ ಆನಂದ್ ಮಹೀಂದ್ರಾ.

54
firstsuddi

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಅಗ್ನಿಪಥ್ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ಮುಂದುವರೆದಿವೆ. ಅನೇಕ ರಾಜ್ಯಗಳಲ್ಲಿ ಪ್ರತಿಭಟನೆಗಳು ಹಿಂಸಾ ರೂಪ ಪಡೆದಿವೆ. ಈ ನಡುವೆಯೇ ಮಹೀಂದ್ರಾ ಗ್ರೂಪ್ ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ನಾಲ್ಕು ವರ್ಷಗಳ ಸೇವೆಯ ನಂತರ ಅಗ್ನಿವೀರರಿಗೆ ತಮ್ಮ ಕಂಪನಿಗಳಲ್ಲಿ ಉದ್ಯೋಗ ಅವಕಾಶ ನೀಡುವುದಾಗಿ ಘೋಷಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅಗ್ನಿಪಥ್ ಯೋಜನೆಯ ಸುತ್ತ ನಡೆಯುತ್ತಿರುವ ಹಿಂಸಾಚಾರದಿಂದ ನನಗೆ ಬೇಸರವಾಗಿದೆ. ಕಳೆದ ವರ್ಷ ಈ ಯೋಜನೆಯನ್ನು ಪ್ರಸ್ತಾಪಿಸಿದಾಗ ನಾನು ಹೇಳಿದ್ದೇನೆ. ಅದನ್ನು ನಾನು ಮತ್ತೆ ಹೇಳಲು ಬಯಸುತ್ತೇನೆ. ಅಗ್ನಿವೀರರು ಗಳಿಸಿರುವ ಶಿಸ್ತು ಮತ್ತು ಕೌಶಲ್ಯಗಳು ಅವರನ್ನು ಅತ್ಯುತ್ತಮ ಉದ್ಯೋಗ ಪಡೆಯಲು ಸಹಾಯ ಮಾಡುತ್ತೆ. ಅಂತಹ ತರಬೇತಿ ಪಡೆದ ಸಮರ್ಥ ಯುವಕರನ್ನು ನೇಮಿಸಿಕೊಳ್ಳುವ ಅವಕಾಶವನ್ನು ಮಹೀಂದ್ರಾ ಗ್ರೂಪ್ ಸ್ವಾಗತಿಸುತ್ತದೆ ಎಂದಿದ್ದಾರೆ.

ಕಾರ್ಪೊರೇಟ್ ವಲಯದಲ್ಲಿ ಅಗ್ನಿವೀರರಿಗೆ ಉದ್ಯೋಗಕ್ಕೆ ದೊಡ್ಡ ಸಾಮರ್ಥ್ಯವಿದೆ. ನಾಯಕತ್ವ, ಟೀಮ್ ವರ್ಕ್ ಮತ್ತು ದೈಹಿಕ ತರಬೇತಿಯೊಂದಿಗೆ ಅಗ್ನಿವೀರರು ಉದ್ಯಮಕ್ಕೆ ಬೇಕಾದ ಮಾರುಕಟ್ಟೆ-ಸಿದ್ಧ ವೃತ್ತಿಪರ ಪರಿಹಾರಗಳನ್ನು ಒದಗಿಸುತ್ತಾರೆ. ಕಾರ್ಯಾಚರಣೆಗಳಿಂದ ಆಡಳಿತ ಮತ್ತು ಪೂರೈಕೆ ಸರಪಳಿ ನಿರ್ವಹಣೆಯವರೆಗಿನ ಸಂಪೂರ್ಣ ಶಕ್ತಿಯನ್ನು ಅವರು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ ಅಗ್ನಿಪಥ್ ಯೋಜನೆ ವಿರುದ್ಧ ಇಂದು ಭಾರತ್ ಬಂದ್ ಗೆ ಕರೆ ನೀಡಲಾಗಿದೆ. ಅಗ್ನಿಪಥ್ ಯೋಜನೆ ಕುರಿತು ನಿನ್ನೆ ಮೂರು ಸೇನೆಗಳ ಮಹಾದಂಡ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿ, ಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಪ್ರತಿಭಟನಾ ನಿರತ ಯುವಕರು ಭಾರತ್ ಬಂದ್ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್ ಪಿಎಫ್ ಮತ್ತು ಜಿಆರ್ ಪಿ ಕಟ್ಟೆಚ್ಚರ ವಹಿಸಿವೆ. ಹಿಂಸಾಚಾರದಲ್ಲಿ ತೊಡಗುವ ಪ್ರತಿಭಟನಾಕಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಭದ್ರತಾ ಸಿಬ್ಬಂದಿಗೆ ಹಿರಿಯ ಅಧಿಕಾರಿಗಳು ಆದೇಶ ನೀಡಿದ್ದಾರೆ.