ಬುಲೆಟ್ ಟ್ರೈನ್ ಯೋಜನೆ ಮುಖ್ಯಸ್ಥ ಸತೀಶ್ ಅಗ್ನಿಹೋತ್ರಿ ವಜಾಗೊಳಿಸಿದ ಕೇಂದ್ರ ಸರ್ಕಾರ.

47
firstsuddi

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಬುಲೆಟ್ ಟ್ರೈನ್ ಯೋಜನೆಯ ಮುಖ್ಯಸ್ಥ ಸತೀಶ್ ಅಗ್ನಿಹೋತ್ರಿ ಅವರನ್ನು ಕೇಂದ್ರ ಸರ್ಕಾರ ನಿನ್ನೆ ವಜಾಗೊಳಿಸಿದೆ. ರಾಷ್ಟ್ರೀಯ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (NHSRCL) ವ್ಯವಸ್ಥಾಪಕ ನಿರ್ದೇಶಕ ಸತೀಶ್ ಅಗ್ನಿಹೋತ್ರಿ ಅವರ ವಿರುದ್ಧ ಅಧಿಕಾರ ದುರ್ಬಳಕೆ, ಯೋಜನೆ ಹಣವನ್ನು ವೈಯಕ್ತಿಕವಾಗಿ ಬಳಕೆ ಮಾಡಿರುವ ಮತ್ತು ಬೇರೆ ಕಂಪನಿಗೆ ಹೂಡಿಕೆ ಮಾಡಿರುವ ಆರೋಪ ಕೇಳಿ ಬಂದಿದೆ.

ಸತೀಶ್ ಅಗ್ನಿಹೋತ್ರಿ ಅವರ ಹುದ್ದೆಯನ್ನು ರದ್ದುಗೊಳಿಸಲು ಸಕ್ಷಮ ಪ್ರಾಧಿಕಾರವು ಅನುಮೋದನೆ ನೀಡಿದ್ದು, ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬಿಡುಗಡೆ ಮಾಡುವಂತೆ ನಿರ್ದೇಶಿಸಲಾಗಿದೆ ಎಂದು NHSRCL ಕಂಪನಿ ಕಾರ್ಯದರ್ಶಿಗೆ ಜುಲೈ 7ರಂದು ರೈಲ್ವೆ ಮಂಡಳಿ ಬರೆದ ಪತ್ರದಲ್ಲಿ ತಿಳಿಸಲಾಗಿದೆ. ಪ್ರಸ್ತುತ NHSRCLನಲ್ಲಿ ನಿರ್ದೇಶಕರಾಗಿ ಅಧಿಕಾರದಲ್ಲಿರುವ ರಾಜೇಂದ್ರ ಪ್ರಸಾದ್ ಅವರಿಗೆ ವ್ಯವಸ್ಥಾಪಕ ನಿರ್ದೇಶಕರಾಗಿ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಳ್ಳಲು ನಿರ್ದೇಶಿಸಲಾಗಿದೆ.

ಅಗ್ನಿಹೋತ್ರಿ ವಿರುದ್ಧ ಭ್ರಷ್ಟಾಚಾರ ತಡೆ ಕಾಯಿದೆ, 1988ರ ಅಡಿಯಲ್ಲಿ ತನಿಖೆ ನಡೆಸಿ ಆರು ತಿಂಗಳೊಳಗೆ ಅಥವಾ ಡಿಸೆಂಬರ್ 12, 2022 ರೊಳಗೆ ತನಿಖಾ ವರದಿಯನ್ನು ಲೋಕಪಾಲ್ ಕಚೇರಿಗೆ ಸಲ್ಲಿಸುವಂತೆ ಸಿಬಿಐಗೆ ಲೋಕಪಾಲ್ ನ್ಯಾಯಾಲಯವು ನಿರ್ದೇಶನ ನೀಡಿದೆ.