ಬೆಂಗಳೂರು : ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ಅನುಮತಿ ಇಲ್ಲದೇ ಫೋಟೋ ತೆಗೆಯಬಾರದು ಮತ್ತು ವಿಡಿಯೋ ಮಾಡಬಾರದು ಎಂಬ ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿ ಮೇರೆಗೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕೆಲಸದ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಯ ಅನುಮತಿಯಿಲ್ಲದೇ ಫೋಟೋ ತಗೆಯುವಂತಿಲ್ಲ ಮತ್ತು ವಿಡಿಯೋ ಚಿತ್ರೀಕರಣ ಮಾಡುವಂತಿಲ್ಲ ಎಂದು ಡಿಪಿಎಆರ್ ಇಲಾಖೆ ಆದೇಶ ಹೊರಡಿಸಿತ್ತು.
ರಾಜ್ಯ ಸರ್ಕಾರದ ಆದೇಶಕ್ಕೆ ಸಾಮಾಜಿಕ ಮಾಧ್ಯಮಗಳು ಸೇರಿದಂತೆ ಹಲವೆಡೆ ವ್ಯಾಪಕ ಟೀಕೆ ಹಾಗೂ ಹೋರಾಟದ ಎಚ್ಚರಿಕೆ ಹೆಚ್ಚಿದ ಬೆನ್ನಲ್ಲೇ ನಿನ್ನೆ ಮಧ್ಯಾಹ್ನ ಜಾರಿ ಮಾಡಲಾಗಿದ್ದ ಆದೇಶವನ್ನು ರಾಜ್ಯ ಸರ್ಕಾರ ತಡರಾತ್ರಿ ವಾಪಸ್ ಪಡೆದಿದೆ.
ಫೋಟೋ, ವಿಡಿಯೋ ಚಿತ್ರೀಕರಣ ನಿಷೇಧ ಆದೇಶದ ಕುರಿತು ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರು ಖಂಡನೆ ವ್ಯಕ್ತಪಡಿಸಿದ್ದರು. ರಾಜ್ಯ ಸರ್ಕಾರವು ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದಲೇ ಈ ಆದೇಶ ಹೊರಡಿಸಿದೆ. ಇದು ಶೇ.40 ರಷ್ಟು ಕಮಿಷನ್ ಸರ್ಕಾರ ಎಂದು ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ಕ್ರಮವನ್ನು ಟೀಕಿಸಿದ್ದರು. ಇದನ್ನು ಗಮನಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಸರ್ಕಾರಕ್ಕೆ ಈ ಆದೇಶದಿಂದ ಕೆಟ್ಟ ಹೆಸರು ಬರುತ್ತದೆ ಎನ್ನುವ ಮುನ್ಸೂಚನೆ ನೀಡಿರುವುದರಿಂದ ಡಿಪಿಎಆರ್ ತನ್ನ ಆದೇಶವನ್ನ ಹಿಂತೆಗೆದುಕೊಂಡಿದೆ.










