ದಾವಣಗೆರೆ : ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಜನಸಾಗರ ಹರಿದು ಬಂದಿದೆ. ಶಾಮನೂರು ಅರಮನೆ ಮೈದಾನದಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಒಟ್ಟು 6 ಲಕ್ಷಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರಬಹುದು ಎಂದು ಅಂದಾಜು ಮಾಡಲಾಗುತ್ತಿದೆ.
ಸಿದ್ದರಾಮೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರು- ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋ ಮೀಟರ್ ವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಂದೇಮಾತರಂ’ ಹಾಡುವ ಮೂಲಕ ಸಿದ್ದರಾಮೋತ್ಸವ ಆರಂಭವಾಗಿದ್ದು, ಸಂಗೀತದ ಮೂಲಕವೇ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯನವರು ತಂದಿದ್ದ ಅನ್ನಭಾಗ್ಯ ಯೋಜನೆ ಜನಪ್ರಿಯವಾಗಿತ್ತು. ಅಕ್ಕಿಯಿಂದ ಮನುಷ್ಯನ ಮೂರ್ತಿ ಕಾರ್ಯಕ್ರಮದಲ್ಲಿ ವಿಶೇಷ ಗಮನ ಸೆಳೆಯಿತು. ಸಿದ್ದರಾಮಯ್ಯನವರ ಕಟೌಟ್ ಗಳು ರಾರಾಜಿಸುತ್ತಿವೆ. ಅವರ ಜನಪ್ರಿಯ ಯೋಜನೆಗಳನ್ನಿಟ್ಟುಕೊಂಡು ಹಾಡುಗಳನ್ನು ರಚಿಸಲಾಗಿದ್ದು ಕಲಾವಿದರು ಹಾಡುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನ ಪ್ರಮುಖ ನಾಯಕರು ಭಾಗಿಯಾಗಿದ್ದು, ಮೂರು ಪುಸ್ತಕಗಳು ಬಿಡುಗಡೆಯಾಗಿವೆ.










