ನನಗೆ ಶಕ್ತಿ ಇರುವವರೆಗೂ ಜನರ ಸೇವೆ ಮಾಡುತ್ತೇನೆ : ಸಿದ್ದರಾಮಯ್ಯ.

68
firstsuddi

ದಾವಣಗೆರೆ : ಜನರ ಸೇವೆಯನ್ನು ನಾನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಜನರ ಆಶೀರ್ವಾದ ಇದ್ದಾಗ ಮಾತ್ರ, ಜನರ ಸೇವೆ ಮಾಡಲು ಆಗುವುದು. ಜನರ ಸೇವೆ ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. ಕರ್ನಾಟಕದ ಎಲ್ಲಾ ಜನತೆಗೆ ಧನ್ಯವಾದಗಳು. ನನಗೆ ಶಕ್ತಿ ಇರುವವರೆಗೂ ಜನರ ಸೇವೆಯನ್ನು ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ದಾವಣಗೆರೆಯಲ್ಲಿ ಇಂದು ನಡೆದ ತಮ್ಮ 75ನೇ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ರಾಹುಲ್ ಗೆ ಕೋಟಿ ಕೋಟಿ ನಮನ. ನನ್ನ ಮೇಲೆ ರಾಹುಲ್ ಗಾಂಧಿ ವಿಶೇಷ ಪ್ರೀತಿ ಇಟ್ಟುಕೊಂಡಿದ್ದಾರೆ. ನಾನು ಕಾಂಗ್ರೆಸ್ ಸೇರಿದಾಗಿನಿಂದಲೂ, ಬೇರೆ ಪಕ್ಷದಿಂದ ಕಾಂಗ್ರೆಸ್ ಗೆ ಬಂದಿದ್ದರೂ ನನ್ನ ಬಗ್ಗೆ ವಿಶೇಷ ಪ್ರೀತಿ ಇದೆ. ನಾನು ಸಿಎಂ ಆಗಲು ರಾಹುಲ್ ಗಾಂಧಿರವರೇ ಕಾರಣಕರ್ತರು. ನನಗೆ ಸೋನಿಯಾ, ರಾಹುಲ್ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಸಿದ್ದರಾಮಯ್ಯ ರಾಹುಲ್, ಸೋನಿಯಾರನ್ನು ಹೊಗಳಿದರು.

ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಹಿಂದೂ ರಾಷ್ಟ್ರ ನಿರ್ಮಾಣ ಬಿಜೆಪಿಯ ಗುರಿಯಾಗಿದೆ. ಕಾಂಗ್ರೆಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಮುಗಿಸುವ ನಿಮ್ಮ ಕನಸು ನನಸು ಆಗಲ್ಲ, ದೇಶದ ಸಂವಿಧಾನ ಬದಲಿಸಲು ಈ ದೇಶದ ಜನ ಬಿಡಲ್ಲ ಎಂದು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಗುಡುಗಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಸರಣಿ ಕೊಲೆಗಳನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇವಲ ಪ್ರವೀಣ್ ನಿವಾಸಕ್ಕೆ ಪರಿಹಾರ ನೀಡಿ, ಮಸೂದ್, ಫಾಜಿಲ್ ಕುಟುಂಬಕ್ಕೆ ಏಕೆ ಪರಿಹಾರ ನೀಡಲಿಲ್ಲ ಎಂದು ಪ್ರಶ್ನಿಸಿದರು. ಬೊಮ್ಮಾಯಿ ಒಂದು ಧರ್ಮಕ್ಕೆ ಸೇರಿದ ಮುಖ್ಯಮಂತ್ರಿನಾ? ನೀವು ಸಿಎಂ ಆಗಿ ಮುಂದುವರೆಯಲು ಯಾವ ನೈತಿಕತೆ ಇದೆ. ರಾಜ್ಯ ಆಳುವುದಕ್ಕೆ ನಾಲಾಯಕ್, ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಒತ್ತಾಯಿಸಿದರು.

ಡಿಕೆಶಿ, ನನ್ನ ಮಧ್ಯೆ ಬಿರುಕು ಇದೆ ಎಂದು ಬಿಂಬಿಸುತ್ತಿದ್ದಾರೆ. ಹುಟ್ಟುಹಬ್ಬ ಆಚರಣೆಗೆ ವಿರೋಧವಿದೆ ಎಂದು ಬಿಂಬಿಸುತ್ತಿದ್ದಾರೆ. ಇದು ವಿರೋಧಿಗಳ ಪಿತೂರಿ. ನಾನು, ಡಿಕೆಶಿ ಒಗ್ಗಟ್ಟಾಗಿದ್ದೇವೆ, ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದರು.