ದೇಶದ 10 ಕೋಟಿ ಗ್ರಾಮೀಣ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ : ಮೋದಿ.

56
firstsuddi

ನವದೆಹಲಿ: ಭಾರತದ 10 ಕೋಟಿ ಗ್ರಾಮೀಣ ಕುಟುಂಬಗಳಿಗೆ ಈಗಾಗಲೇ ಪೈಪ್ ಗಳ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಗೋವಾದ ಪಣಜಿಯಲ್ಲಿ ನಡೆದ ‘ಹರ್ ಘರ್ ಜಲ ಉತ್ಸವ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಇಂದು ದೇಶದ 10 ಕೋಟಿ ಗ್ರಾಮೀಣ ಕುಟುಂಬಗಳಿಗೆ ಪೈಪ್ ಗಳ ಮೂಲಕ ಶುದ್ಧ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಇದು ಪ್ರತಿ ಮನೆಗೆ ನೀರು ತಲುಪಿಸುವ ಸರ್ಕಾರದ ಅಭಿಯಾನದ ದೊಡ್ಡ ಯಶಸ್ಸಾಗಿದೆ. ಗೋವಾ ‘ಹರ್ ಘರ್ ಜಲ್’ ಎಂದು ಪ್ರಮಾಣೀಕರಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದಾದ್ರಾ ನಗರ ಹವೇಲಿ ಮತ್ತು ದಮನ್ ಮತ್ತು ಡಿಯು ಕೂಡ ‘ಹರ್ ಘರ್ ಜಲ್’ ಪ್ರಮಾಣೀಕೃತ ಕೇಂದ್ರಾಡಳಿತ ಪ್ರದೇಶಗಳಾಗಿ ಮಾರ್ಪಟ್ಟಿವೆ ಎಂದಿದ್ದಾರೆ.

ಭಾರತದ 3ನೇ ಸಾಧನೆ ‘ಸ್ವಚ್ಛ ಭಾರತ ಅಭಿಯಾನ’ಕ್ಕೆ ಸಂಬಂಧಿಸಿದ್ದಾಗಿದೆ. ಕೆಲವು ವರ್ಷಗಳ ಹಿಂದೆ ಭಾರತದ ಎಲ್ಲಾ ಪ್ರಜೆಗಳ ಪ್ರಯತ್ನದಿಂದ ದೇಶವನ್ನು ಬಯಲು ಶೌಚ ಮುಕ್ತ ಎಂದು ಘೋಷಿಸಲಾಯಿತು. ಈ ನಿಟ್ಟಿನಲ್ಲಿ ಭಾರತವೂ ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸಿದೆ. ಈಗ ದೇಶದ ವಿವಿಧ ರಾಜ್ಯಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಹಳ್ಳಿಗಳು ಒಡಿಎಫ್ ಪ್ಲಸ್ ಆಗಿವೆ ಎಂದು ಪ್ರಧಾನಿ ಹೇಳಿದ್ದಾರೆ.

ನಮ್ಮ ಸರ್ಕಾರ ಕಳೆದ 8 ವರ್ಷಗಳಿಂದ ಜಲ ಭದ್ರತೆಗೆ ಶ್ರಮಿಸುತ್ತಿದೆ. ಸರ್ಕಾರ ರಚನೆಗೆ ಇಷ್ಟೊಂದು ಶ್ರಮ ಬೇಕಾಗಿಲ್ಲ. ಆದರೆ, ದೇಶ ರಚನೆಗೆ ಕಠಿಣ ಪರಿಶ್ರಮ ಬೇಕು. ನಾವೆಲ್ಲರೂ ದೇಶವನ್ನು ನಿರ್ಮಿಸುವ ಮಾರ್ಗವನ್ನು ಆರಿಸಿಕೊಂಡಿದ್ದೇವೆ. ಆದ್ದರಿಂದ ನಾವು ದೇಶದ ಪ್ರಸ್ತುತ ಮತ್ತು ಭವಿಷ್ಯದ ಸವಾಲುಗಳನ್ನು ನಿರಂತರವಾಗಿ ಪರಿಹರಿಸುತ್ತಿದ್ದೇವೆ ಎಂದು ಮೋದಿ ತಿಳಿಸಿದ್ದಾರೆ.