ಚಿಕ್ಕಮಗಳೂರು : ಜಾನಪದವೇ ನಮ್ಮ ಸಂಸ್ಕೃತಿಯ ಮೂಲಬೇರು ಎಂದು ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಡಾ|| ಬಿ.ಪಿ.ವೀರಭದ್ರಪ್ಪ ಹೇಳಿದರು.
ಕಡೂರು ತಾಲ್ಲೂಕಿನ ಗಿರಿಯಾಪುರದಲ್ಲಿ ಕರ್ನಾಟಕ ಜಾನಪದ ಪರಿಷತ್ ಭಾನುವಾರ ಆಯೋಜಿಸಿದ್ದ ಹಿರೇನಲ್ಲೂರು ಹೋಬಳಿ ಮಟ್ಟದ ಪ್ರಥಮ ಜಾನಪದ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಖಾಸಗೀಕರಣ, ಜಾಗತೀಕರಣ ಮತ್ತು ಆಧುನಿಕತೆಯ ಭರದಿಂದಾಗಿ ನಮ್ಮ ಸಂಸ್ಕೃತಿ ವಿನಾಶದತ್ತ ಸಾಗಿದೆ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಇದಕ್ಕೆ ಪರಿಹಾರವಾಗಿದೆ ಎಂದರು.
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಬೆಳ್ಳಿಪ್ರಕಾಶ್ ಯಾವುದೇ ಕಲೆಯನ್ನು ಜೀವಂತವಾಗಿಡಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.
ಜಾನಪದ ತಜ್ಞ ಡಾ|| ಅಪ್ಪಗೆರೆ ತಿಮ್ಮರಾಜು ಮಾತನಾಡಿ ಮುಂದಿನ ದಿನಗಳಲ್ಲಿ ಜಾನಪದ ಮಹಿಳಾ ಸಮ್ಮೇಳನಗಳನ್ನು ಆಯೋಜಿಸುವಂತೆ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಿಗೆ ಸಲಹೆ ಮಾಡಿದರು.
ಆಶಯ ಭಾಷಣ ಮಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ತಿರುಳಿಲ್ಲದ ಚಲನಚಿತ್ರಗೀತೆಗಳಿಗೆ ಮಾರುಹೋಗುವ ಬದಲು ಜಾನಪದದತ್ತ ಒಲವು ತೋರಿಸಿ 450ಕ್ಕೂ ಹೆಚ್ಚು ಜಾನಪದ ಪ್ರಾಕಾರಗಳನ್ನು ಕೇಳಿ, ನೋಡಿ ಆನಂದಿಸುವಂತೆ ಯುವಜನತೆಗೆ ಕರೆ ನೀಡಿದರು.
ಸಮ್ಮೇಳನಾಧ್ಯಕ್ಷ ಬಿ.ಪಿ.ಜಗದೀಶ್ ಮಾತನಾಡಿ ಜಾನಪದದ ಮೌಲ್ಯಗಳು ಪ್ರತಿಯೊಬ್ಬರ ಬದುಕಿನಲ್ಲೂ ಹಾಸುಹೊಕ್ಕಾಗಿವೆ, ನಮ್ಮ ಪರಂಪರೆ, ಸಂಸ್ಕೃತಿ ಈ ಕಲೆಗಳಲ್ಲಿ ಅಡಗಿವೆ ಎಂದರು.
ಸಮ್ಮೇಳನಕ್ಕೆ ಮುನ್ನ ತುಂತುರು ಮಳೆಯ ನಡುವೆ ಸಮ್ಮೇಳನಾಧ್ಯಕ್ಷ ಬಿ.ಪಿ.ಜಗದೀಶ್ ಅವರನ್ನು ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.
ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎ.ಎಂ.ಜಗದೀಶ್ವರಾಚಾರ್, ಬಡಗನಾಡು ಹೇಮರೆಡ್ಡಿ ಸಂಘದ ಅಧ್ಯಕ್ಷ ಹೆಚ್.ಸಿ.ರೇವಣಸಿದ್ದಪ್ಪ, ಬಿಜೆಪಿ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಸುನಿತ, ಪತ್ರಕರ್ತ ಹೆಚ್.ಎಸ್.ಪರಮೇಶ್, ಹಿರಿಯ ವೀರಗಾಸೆ ಕಲಾವಿದ ಡಾ|| ಮಾಳೇನಹಳ್ಳಿ ಬಸಪ್ಪ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯೆ ಮುಗುಳಿ ಲಕ್ಷ್ಮೀದೇವಮ್ಮ, ಹೋಬಳಿ ಅಧ್ಯಕ್ಷ ಸಿ.ಎಸ್.ಜಯಣ್ಣ ಉಪಸ್ಥಿತರಿದ್ದರು.










