7 ವರ್ಷದಿಂದ ಯುವತಿಗೆ ಲೈಂಗಿಕ ದೌರ್ಜನ್ಯ – ನಕಲಿ ಸ್ವಾಮೀಜಿಯ ಕಾಮ ಪುರಾಣ ಬಯಲು…

95
firstsuddi

ಬೆಂಗಳೂರು : ಕಳೆದ ಏಳು ವರ್ಷಗಳಿಂದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ನಕಲಿ ಸ್ವಾಮೀಜಿಯೊಬ್ಬ ಇತ್ತೀಚೆಗೆ ನೀನು ಮದುವೆಯಾಗಿ ಚೆನ್ನಾಗಿರು ಎಂದು ಹೇಳಿದ್ದನು. ಆದರೆ ಇದೀಗ ಮದುವೆ ನಿಶ್ಚಯವಾಗಿದ್ದ ಹುಡುಗನಿಗೆ ಯುವತಿಯ ಖಾಸಗಿ ಫೋಟೋ ಕಳುಹಿಸಿ ಆಕೆಯ ಬಾಳನ್ನೇ ಹಾಳು ಮಾಡಲು ಮುಂದಾಗಿದ್ದಾನೆ. ಸದ್ಯ ಕಪಟ ಸ್ವಾಮಿಯ ಕಾಮ ಪುರಾಣ ಬಯಲಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯನ್ನು ಆನಂದ ಮೂರ್ತಿ ಎಂದು ಗುರುತಿಸಲಾಗಿದ್ದು, ಅವಲಹಳ್ಳಿ ಸಮೀಪ ಆಶ್ರಮ, ಮನೆ ಹೊಂದಿದ್ದಾನೆ. ಕಳೆದ 7 ವರ್ಷಗಳ ಹಿಂದೆ ಸಂತ್ರಸ್ತ ಯುವತಿಗೆ ಕಪಟ ಸ್ವಾಮೀಜಿಯ ಪರಿಚಯವಾಗಿದ್ದು, ನಿನಗೂ ಹಾಗೂ ನಿನ್ನ ಕುಟುಂಬಕ್ಕೆ ದೋಷವಿದೆ. ಹೀಗಾಗಿ ಪೂಜೆ ಮಾಡಬೇಕು ಎಂದು ಆಶ್ರಮಕ್ಕೆ ಯುವತಿಯನ್ನು ಕರೆಸಿಕೊಂಡಿದ್ದನು. ಈ ವೇಳೆ ಯುವತಿಗೆ ಮತ್ತು ಬರುವ ಔಷಧ ನೀಡಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಕಪಟ ಸ್ವಾಮೀಜಿಯ ಕಾಮಪುರಾಣಕ್ಕೆ ಆತನ ಪತ್ನಿಯೂ ಸಾಥ್ ನೀಡಿದ್ದಾರೆ ಎನ್ನಲಾಗುತ್ತಿದೆ.

ಅಷ್ಟೇ ಅಲ್ಲದೆ ಈ ವೇಳೆ ಖಾಸಗಿ ಫೋಟೋಗಳನ್ನು ಕೂಡ ನಕಲಿ ಸ್ವಾಮೀಜಿ ತೆಗೆದುಕೊಂಡಿದ್ದಾನೆ. ಜೊತೆಗೆ ನಿನ್ನ ಜಾತಕದ ಪ್ರಕಾರ ನೀನು ನನ್ನೊಂದಿಗೆ ಇರಬೇಕು, ನಾನು ಕಾಳಿ ಆರಾಧಕ ನನ್ನನ್ನು ನಂಬು ನಿನ್ನ ಎಲ್ಲಾ ಕಷ್ಟ ಪರಿಹಾರ ಮಾಡುತ್ತೇನೆ. ನನ್ನ ಆಶ್ರಮಕ್ಕೆ ಬಾ ನಿನಗೆ ದೀಕ್ಷೆ ಕೊಡುತ್ತನೆ ಎಂದೆಲ್ಲಾ ವಂಚನೆಯ ಮಾತುಗಳನ್ನಾಡಿ ಯುವತಿಯನ್ನು ಪುಸಲಾಯಿಸಿದ್ದನು. ಅಲ್ಲದೆ ತನ್ನ ಪತ್ನಿಗೂ ಯುವತಿಯ ಪರಿಚಯ ಮಾಡಿಕೊಟ್ಟಿದ್ದನು. ‘ನಾನು ಶ್ರೀ ಕೃಷ್ಣ ನೀನು ರಾಧೆ ಇವಳು ರುಕ್ಮಿಣಿ ಎಂದು ಯುವತಿಯನ್ನ ತನ್ನ ಪತ್ನಿಗೆ ಪರಿಚಯ ಮಾಡಿಕೊಟ್ಟಿದ್ದ.

7 ವರ್ಷಗಳಿಂದ ಯುವತಿಯನ್ನು ಆಗಾಗ ಆಶ್ರಮಕ್ಕೆ ಕರೆಸಿಕೊಂಡು ಲೈಂಗಿಕವಾಗಿ ಬಳಸಿಕೊಂಡಿದ್ದ ಸ್ವಾಮೀಜಿ ಇತ್ತೀಚೆಗೆ ನೀನು ಮದುವೆಯಾಗಿ ಚೆನ್ನಾಗಿರು ಎಂದು ಹೇಳಿದ್ದನು. ಅಸಲಿ ವಿಚಾರ ತಿಳಿಯದೇ ಯುವತಿಯ ಮನೆಯವರು ಆಕೆಗೆ ಮದುವೆ ತಯಾರಿ ನಡೆಸಿದ್ದರು. ಆದರೆ 2 ದಿನಗಳ ಬಳಿಕ ಮದುವೆ ನಿಶ್ಚಯವಾಗಿದ್ದ ಹುಡುಗನಿಗೆ ಯುವತಿಯ ಖಾಸಗಿ ಫೋಟೋ ಕಳಿಸಿದ್ದಾನೆ. ಇದರಿಂದಾಗಿ ನಿಶ್ಚಯವಾಗಿದ್ದ ಮದುವೆಯೂ ಮುರಿದುಬಿತ್ತು. ವಿಷಯ ತಿಳಿದು ಕಂಗಾಲಾಗಿರುವ ಸಂತ್ರಸ್ತೆ ಯುವತಿಯ ಪೋಷಕರು ಕೆ.ಆರ್.ಪುರಂ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.