ವೀರಶೈವ ಲಿಂಗಾಯತ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡದಂತೆ ಒತ್ತಾಯಿಸಿ ಪ್ರತಿಭಟನೆ…

71
firstsuddi

ಚಿಕ್ಕಮಗಳೂರು : ವೀರಶೈವ ಲಿಂಗಾಯತ ಸಮುದಾಯದ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡದಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ನಗರದಲ್ಲಿ ಇಂದು ಪ್ರತಿಭಟನೆ ನಡೆಸಿತು.

ಆಜಾದ್ ಪಾರ್ಕ್ ವೃತ್ತದ ಬಳಿ ಪ್ರತಿಭಟನೆ ನಡೆಸಿದ ಸಮಿತಿಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ವೀರಶೈವ ಲಿಂಗಾಯತ ಸಮುದಾಯದ ಕೆಲ ಪಂಗಡಗಳವರು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿರುವುದನ್ನು ತೀವ್ರವಾಗಿ ವಿರೋಧಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ಟಿ.ಮಂಜಪ್ಪ ಮೇಲ್ವರ್ಗದ ಜನರಾದ ವೀರಶೈವ ಲಿಂಗಾಯಿತರು ದಲಿತರ ಸವಲತ್ತುಗಳನ್ನು ಕಿತ್ತುಕೊಳ್ಳಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ ವೀರಶೈವ ಲಿಂಗಾಯಿತ ಸಮುದಾಯದವರು ಪರಿಶಿಷ್ಟ ಜಾತಿ ಪ್ರಮಾಣ ಪಡೆದುಕೊಳ್ಳಲು ತಾವು ಅಸೃಶ್ಯರೆಂದು ಸುಳ್ಳು ಹೇಳುತ್ತಿದ್ದಾರೆ, ಪರಿಶಿಷ್ಟರ ಮೀಸಲಾತಿ ಸವಲತ್ತುಗಳನ್ನು ಕಬಳಿಸಲು ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಜಾತಿಯಿಂದ ಲಿಂಗಾಯಿತರಾಗಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಮಗಳು ಹೇಗೆ ದಲಿತರಾಗುತ್ತಾಳೆ ಎಂದು ಪ್ರಶ್ನಿಸಿದ ಅವರು ದಲಿತರ ಸವಲತ್ತುಗಳನ್ನು ದೋಚಲು ಮುಂದಾಗಿರುವ ರೇಣುಕಾಚಾರ್ಯ ಅವರನ್ನು ತಕ್ಷಣ ಬಂಧಿಸಿ ಅವರ ವಿರುದ್ದ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಲ್.ಎಸ್.ಶ್ರೀಕಾಂತ್ ಮಾತನಾಡಿ ಅಕ್ರಮವಾಗಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿರುವವರನ್ನು ಬಂಧಿಸಿ ಅವರ ವಿರುದ್ದ ದೌರ್ಜನ್ಯ ಕಾಯ್ದೆಯಡಿ ಮೊಕದ್ದಮೆ ದಾಖಲಿಸಬೇಕು, ಅವರಿಗೆ ನೀಡಲಾಗಿರುವ ಮೀಸಲಾತಿ ಸವಲತ್ತುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿರುವವರ ವಿರುದ್ದ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು.

ಪ್ರತಿಭಟನೆ ನಂತರ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಪಿ.ಶಿವಪ್ರಸಾದ್, ಕಡೂರು ತಾಲ್ಲೂಕು ಸಂಘಟನಾ ಸಂಚಾಲಕ ಎ.ಆರ್.ಮಂಜುನಾಥ್, ಜಿಲ್ಲಾ ಖಜಾಂಚಿ ಲಕ್ಷ್ಮಣ್, ತರೀಕೆರೆ ತಾಲ್ಲೂಕು ಸಂಚಾಲಕ ಸಿದ್ರಾಮಪ್ಪ, ಈಶಣ್ಣ, ನಾರಾಯಣ ಸ್ವಾಮಿ, ಶ್ರೀನಿವಾಸ್, ಕಲ್ಲೇಶ್, ಹಿರೇಮಗಳೂರು ರಮೇಶ್, ಕೃಷ್ಣ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.