ಬೆಂಗಳೂರು : ವಿಧಾನಸಭೆಯಲ್ಲಿ ಮೊದಲ ದಿನದ ಕಲಾಪ ಆರಂಭದಲ್ಲಿ ರಾಣಿ ಎಲಿಜಬೆತ್, ಉಮೇಶ್ ಕತ್ತಿ ಸೇರಿದಂತೆ ನಿಧನರಾದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಇವರ ಜೊತೆ ಮಾಜಿ ಸಚಿವ ಪ್ರಭಾಕರ್ ರಾಣೆ, ಮಾಜಿ ಶಾಸಕ ಎ ಕೆಂಪೇಗೌಡ, ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಮಾಜಿ ಶಾಸಕ ದೇಸಾಯಿ, ಸುಗಮ ಸಂಗೀತಗಾರ ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ಸ್ಪೀಕರ್ ಕಾಗೇರಿ ಮಂಡಿಸಿದ ಸಂತಾಪ ಸೂಚಕ ಪ್ರಸ್ತಾಪಕ್ಕೆ ಬೆಂಬಲಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ ಕ್ರಿಯಾಶೀಲ ವರ್ಣರಂಜಿತ ರಾಜಕಾರಣಿ. ತೀಕ್ಷ್ಣವಾದ ಸಾಮಾನ್ಯ ಜ್ಞಾನ ಬುದ್ದಿವಂತಿಕೆ ಹೊಂದಿದವರಾಗಿದ್ದರು ಎಂದು ನೆನಪಿಸಿಕೊಂಡರು.
ಉಮೇಶ್ ಕತ್ತಿ ಹಿಡಿದ ಕೆಲಸ ಮುಗಿಸದೇ ಬಿಡ್ತಿರ್ಲಿಲ್ಲ. ಬಹಳ ಹಾಸ್ಯ ಪ್ರವೃತ್ತಿ ಇತ್ತು. ಪಕ್ಷ ಬದಲಾವಣೆ ಮಾಡುತ್ತಿದರೂ ಜನ ಅವರನ್ನು ಜನ ಕೈ ಬಿಟ್ಟಿರಲಿಲ್ಲ. ಶ್ರೀಮಂತಿಕೆ ಇದ್ದರೂ ಜನಸಾಮಾನ್ಯರ ನೆಂಟಸ್ತಿಕೆ ಬಿಡುತ್ತಿರಲಿಲ್ಲ. ಶಾಸಕರಾದ ಮೇಲೆ ಸಣ್ಣ ವಯಸ್ಸಿನಲ್ಲಿ ರಾಮಕೃಷ್ಣ ಹೆಗಡೆ ಹಾಗೂ ಎಸ್ ಆರ್ ಬೊಮ್ಮಾಯಿಗೆ ಹತ್ತಿರವಾಗಿದ್ದರು. ಮುಕ್ತವಾದ ಮನಸ್ಸು ಮಾತು ಹೊಂದಿದ್ದರು. ಕ್ಷೇತ್ರದ ಜನರ ಪ್ರೀತಿಗೆ ಪಾತ್ರರಾಗಿದ್ದರು. ಎಲ್ಲ ಪಾರ್ಟಿ ಬಿ ಫಾರಂ ನನ್ನ ಜೇಬಿನಲ್ಲಿ ಇದೆ ಎಂದು ತಮಾಷೆಗೆ ಹೇಳುತ್ತಿದ್ದರು. ಜನರ ಮಧ್ಯೆ ಇದ್ದು ಬೆಳೆದ ರಾಜಕಾರಣಿ. ಸ್ನೇಹಮಯ ಸ್ವಭಾವ ಹೊಂದಿದ್ದರು. ಕತ್ತಿ ಬಂಧಿಖಾನೆ, ತೋಟಗಾರಿಕೆ ಸಚಿವರಾಗಿದ್ದರು. ಒಮ್ಮೆ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ಪತ್ರ ಕೊಡಲು ಹೋಗಿದ್ದರು. ಆದರೆ ಎಸ್ ಆರ್ ಬೊಮ್ಮಾಯಿ ಅವರು ಸಮಾಧಾನ ಮಾಡಿದ್ದರು. ನಂತರ ಅವರಿಗೆ ಪಿಡಬ್ಯುಡಿ ಖಾತೆ ಸಿಕ್ಕಿತು ಎಂದರು.
ಉತ್ತರ ಕರ್ನಾಟಕದ ಬಗ್ಗೆ ಪದೇ ಪದೇ ಧ್ವನಿ ಎತ್ತುತ್ತಿದ್ದರು. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಆಗಬೇಕು ಎಂಬ ಕಳಕಳಿಯಲ್ಲಿ ಮಾತನಾಡುತ್ತಿದ್ದರು ಹೊರತು ರಾಜ್ಯ ಒಡೆಯುವ ಉದ್ದೇಶ ಇರಲಿಲ್ಲ ಎಂದು ಕತ್ತಿ ಹೇಳಿಕೆಗಳನ್ನು ಸಿಎಂ ಸಮರ್ಥಿಸಿಕೊಂಡರು.










