ಪ.ಜಾತಿ/ಪ.ಪಂಗಡದ ಹಿತ ಕಾಯುವ ನಿಟ್ಟಿನಲ್ಲಿ ಕಾಯ್ದೆ ಜಾರಿಗೆ ಸುಗ್ರಿವಾಜ್ಞೆ ಹೊರಡಿಸುವಂತೆ ಒತ್ತಾಯ…

86
firstsuddi

ಚಿಕ್ಕಮಗಳೂರು : ಪ.ಜಾತಿ/ಪ.ಪಂಗಡದ ಹಿತ ಕಾಯುವ ನಿಟ್ಟಿನಲ್ಲಿ 1978/79ರ ಪಿಟಿಸಿಎಲ್ ಕಾಯ್ದೆಯ ಯಥಾವತ್ತು ಜಾರಿಗಾಗಿ ಸುಗ್ರಿವಾಜ್ಞೆ ಹೊರಡಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ ಅವರನ್ನು ಇಂದು ಭೇಟಿ ಮಾಡಿದ ಸಮಿತಿಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಭೂಮಿಯನ್ನು ಉಳಿಸುವ ನಿಟ್ಟಿನಲ್ಲಿ ಭೂ ಪರಭಾರೆ ನಿಷೇಧ ಕಾಯ್ದೆ ಜಾರಿಗೆ ತಂದು ನಾಲ್ಕು ದಶಕಗಳಾಗಿದ್ದರೂ ಅದು ಇದುವರೆಗೂ ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಪದಾಧಿಕಾರಿಗಳು ಪರಿಶಿಷ್ಟರ ಭೂಮಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಕಾಯ್ದೆ ಜಾರಿಗೆ ಕೂಡಲೇ ಸುಗ್ರ್ರೀವಾಜ್ಞೆ ಹೊರಡಿಸಬೇಕು ಎಂದು ಆಗ್ರಹಿಸಿದರು.

ಪರಿಶಿಷ್ಟರ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆದಿರುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು, ಮೀಸಲಾತಿಯಿಂದ ಅವರು ಇದುವರೆಗೆ ಪಡೆದಿರುವ ಎಲ್ಲಾ ಸೌಲಭ್ಯಗಳನ್ನು ಹಿಂಪಡೆಯಬೇಕು, ಅವರಿಂದ ತೆರವಾದ ಸ್ಥಾನಗಳಿಗೆ ಪರಿಶಿಷ್ಟರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ಐಪಿಡಿ ಹಾಲಪ್ಪ ವರದಿ ಸರ್ಕಾರಿ ಸುತ್ತೋಲೆ 6ರ ಪ್ರಕಾರ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ ನೇರ ವೇತನ, ಗುತ್ತಿಗೆ, ದಿನಗೂಲಿ, ಪೌರ ಕಾರ್ಮಿಕರನ್ನು ಖಾಯಂ ನೌಕರರನ್ನಾಗಿ ಮಾಡಬೇಕು ಎಂದು ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಕೆ.ಸಿ.ವಸಂತಕುಮಾರ್, ಜಿಲ್ಲಾ ಸಂಚಾಲಕ ಬಿ.ಎನ್.ಚೌಡಪ್ಪ, ಖಜಾಂಚಿ ವಿ.ಧರ್ಮೇಶ್, ಜಿಲ್ಲಾ ಸಂಘಟನಾ ಸಂಚಾಲಕರಾದ ಹೆಚ್.ಇ.ದೊಡ್ಡಯ್ಯ, ಪಿ.ಜಿ.ಸಗನಪ್ಪ, ಎಂ.ಸಿ.ಜಯರಾಮಯ್ಯ, ಇಲಿಯಾಜ್ ಅಹಮದ್ ಹಾಜರಿದ್ದರು.