ಬೆಂಗಳೂರು : ಸಬ್ ಅರ್ಬನ್ ರೈಲ್ವೇ ಯೋಜನೆಗೆ ಕೇಂದ್ರದ ಮಾಜಿ ಸಚಿವ ದಿ. ಅನಂತ್ ಕುಮಾರ್ ಹೆಸರಿಡುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿ ಸಂಪುಟದಲ್ಲಿ ನಿರ್ಧಾರ ಕೈಗೊಂಡು ಕೇಂದ್ರಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ವಸತಿ ಸಚಿವ ವಿ. ಸೋಮಣ್ಣ ಅವರು ಹೇಳಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಗೋಪಿನಾಥ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಬ್ ಅರ್ಬನ್ ರೈಲ್ವೇ ಅನಂತ್ ಕುಮಾರ್ ಅವರ ಕನಸಿನ ಯೋಜನೆ. ಈ ಯೋಜನೆ ಬೆಂಗಳೂರಿಗೆ ಬರಲು ಸಾಕಷ್ಟು ಶ್ರಮ ಹಾಕಿದ್ದಾರೆ. ಹೀಗಾಗಿ ಅವರಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ. ಈ ಹಿನ್ನೆಲೆಯಲ್ಲಿ ಸಬ್ ಅರ್ಬನ್ ರೈಲ್ವೇ ಯೋಜನೆಗೆ ಅನಂತ್ ಕುಮಾರ್ ಹೆಸರು ಇಡುವ ಚಿಂತನೆ ಇದೆ. ಯೋಜನೆಗೆ ಕೇಂದ್ರ ಸರ್ಕಾರದ ಅನುದಾನವೂ ಇರುವುದರಿಂದ ಕೇಂದ್ರದ ಅನುಮತಿ ಇದಕ್ಕೆ ಬೇಕಾಗುತ್ತದೆ. ಸಿಎಂ ಜೊತೆ ಈ ಬಗ್ಗೆ ಚರ್ಚೆ ಮಾಡಿ ಅನಂತ್ ಕುಮಾರ್ ಹೆಸರು ಇಡಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಅಂತ ತಿಳಿಸಿದರು.










