ಗಾಯಕಿ ಪಲಕ್ ಮುಚ್ಚಲ್ ಅವರು ಬಹುಕಾಲದ ಗೆಳೆಯನ ಜೊತೆ ಹಸೆಮಣೆ ಏರಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ನ.6 (ನಿನ್ನೆ)ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಈ ಜೋಡಿಯ ಮದುವೆ ಮತ್ತು ರಿಸೆಪ್ಷನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹಲವು ವರ್ಷಗಳಿಂದ ಪಲಕ್ ಮುಚ್ಚಲ್ ಮತ್ತು ಮಿಥುನ್ ಶರ್ಮಾ ಪ್ರೀತಿಸುತ್ತಿದ್ದರು. ಮಿಥುನ್ ಶರ್ಮಾ ಕೂಡ ಬಾಲಿವುಡ್ ನಲ್ಲಿ ತಮ್ಮ ಸಂಗೀತ ನಿರ್ದೇಶನದ ಮೂಲಕ ಗುರುತಿಸಿಕೊಂಡಿದ್ದಾರೆ. ಈ ಜೋಡಿಯ ಮದುವೆಗೆ ಅನೇಕ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದಾರೆ.
ಕನ್ನಡ, ತಮಿಳು, ತೆಲಗು, ಹಿಂದಿ ಸೇರಿದಂತೆ ಸಾಕಷ್ಟು ಭಾಷೆಯ ಹಾಡುಗಳು ಪಲಕ್ ಕಂಠದಲ್ಲಿ ಮೂಡಿ ಬಂದಿದೆ. ‘ಅಯೋಗ್ಯ’ ಸಿನಿಮಾದ ‘ಏನಮ್ಮಿ ಏನಮ್ಮಿ..’ ‘ಅಧ್ಯಕ್ಷ’ ಸಿನಿಮಾದ ‘ಸುಮ್ ಸುಮ್ನೆ ಕಾಡ್ತಿಯಲ್ಲೋ ಯಾಕಿಂಗೆ..’, ‘ಮುಕುಂದಾ ಮುರಾರಿ’ ಚಿತ್ರದ ‘ಗೋಪಾಲ ಬಾ..’ ಸೇರಿದಂತೆ ಹಲವು ಕನ್ನಡ ಹಾಡುಗಳಿಗೆ ಪಲಕ್ ಮುಚ್ಚಲ್ ಧ್ವನಿ ನೀಡಿದ್ದಾರೆ.
ಇನ್ನೂ ಅನೇಕ ಕಡೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿರುವ ಪಲಕ್, ಅದರಿಂದ ಬಂದ ಹಣದಲ್ಲಿ ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆಗೆ ಸಹಾಯ ಮಾಡಿದ್ದಾರೆ. ಈವರೆಗೂ 2,200ಕ್ಕೂ ಹೆಚ್ಚು ಮಕ್ಕಳ ಜೀವ ಉಳಿಸಿದ್ದಾರೆ.










