ದಿಸ್ಪುರ್ : ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ನಡೆದಿದೆ. ಸಂತ್ರಸ್ತ ಬಾಲಕಿ ನವೆಂಬರ್ 1ರಂದು ಅತ್ಯಾಚಾರ ನಡೆದಿರುವುದಾಗಿ ರಾಮಕೃಷ್ಣನಗರದ ಕಾಳಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು 13 ರಿಂದ 15 ವರ್ಷದೊಳಗಿನ 6 ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆ ನಡೆದಾಗ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಳು. ಹುಡುಗರು ಬಲವಂತವಾಗಿ ಮನೆಗೆ ನುಗ್ಗಿ ಒಬ್ಬೊಬ್ಬರಾಗಿ ಅತ್ಯಾಚಾರವೆಸಗಿದರು. ಅವರು ತಮ್ಮ ಫೋನ್ ಗಳಲ್ಲಿ ಕೃತ್ಯದ ವಿಡಿಯೋಗಳನ್ನು ಸಹ ರೆಕಾರ್ಡ್ ಮಾಡಿದ್ದಾರೆ ಮತ್ತು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತೆಯ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ಆರಂಭದಲ್ಲಿ, ಹುಡುಗಿ ಆಘಾತಕ್ಕೊಳಗಾದಳು ಮತ್ತು ಭಯಗೊಂಡಿದ್ದರಿಂದ ಕೃತ್ಯದ ಬಗ್ಗೆ ಯಾರಿಗೂ ಹೇಳಿಲ್ಲ. ನಂತರ ಪೋಷಕರು ಆಕೆಯನ್ನು ಸಮಾಧಾನಪಡಿಸಿ ದೂರು ಕೊಡಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪಾರ್ಥ ಪ್ರತಿಮ್ ದಾಸ್ ಹೇಳಿದ್ದಾರೆ.
ಪೊಲೀಸರು ಐಪಿಸಿಯ ವಿವಿಧ ವಿಭಾಗಗಳು ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ, 2012 (ಪೊಕ್ಸೊ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದೆ.










