ದೆಹಲಿಯಲ್ಲಿ ಭಯಾನಕ ಘಟನೆ.. ಗೆಳತಿಯನ್ನು ಕೊಂದು ದೇಹವನ್ನು 35 ತುಂಡು ಮಾಡಿ ಬಿಸಾಡಿದ ಪ್ರಿಯಕರ!

96
firstsuddi

ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ 2022ರ ಮೇ 18 ರಂದು ನಡೆದಿರುವ ಕೊಲೆಯನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ. ತನ್ನೊಂದಿಗೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಗೆಳತಿಯನ್ನು ಕೊಲೆ ಮಾಡಿ, ಬಳಿಕ ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ದೆಹಲಿಯ ಬೇರೆ ಬೇರೆ ಪ್ರದೇಶಗಳಲ್ಲಿ ದೇಹದ ಭಾಗಗಳನ್ನು ಎಸೆದಿರುವ ಘಟನೆ ನಡೆದಿದೆ.

ಆರೋಪಿಯನ್ನು ಅಫ್ತಾಬ್ ಅಮೀನ್ ಪೂನವಾಲಾ ಎಂದು ಗುರುತಿಸಲಾಗಿದೆ. ಯುವತಿ ಶ್ರದ್ಧಾ (26) ಮುಂಬೈನ ಬಹುರಾಷ್ಟ್ರೀಯ ಕಂಪನಿಯ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದು ಅಲ್ಲಿ ಆಕೆ ಅಫ್ತಾಬ್ ನನ್ನು ಭೇಟಿಯಾಗಿದ್ದಳು. ಇಬ್ಬರೂ ಡೇಟಿಂಗ್ ಮಾಡಲು ಪ್ರಾರಂಭಿಸಿ ನಂತರ ಜತೆಗೆ ಇರಲು ನಿರ್ಧರಿಸಿದ್ದರು. ಆದರೆ ಶ್ರದ್ಧಾಳ ಕುಟುಂಬವು ಈ ಸಂಬಂಧವನ್ನು ಒಪ್ಪದೇ ಇದ್ದಾಗ ಇಬ್ಬರು ದೆಹಲಿಗೆ ಬಂದಿದ್ದರು. ದೆಹಲಿಯ ಮೆಹ್ರೌಲಿಯ ಫ್ಲಾಟ್ ನಲ್ಲಿ ಅವರಿಬ್ಬರೂ ವಾಸವಾಗಿದ್ದರು.

ಶ್ರದ್ಧಾ ಯಾವಾಗಲೂ ಮದುವೆಯಾಗುವಂತೆ ಪೀಡಿಸುತ್ತಿದ್ದಳು. ಈ ವಿಚಾರವಾಗಿ ಆಗಾಗ ಜಗಳವಾಗುತ್ತಿದ್ದರಿಂದ ಮೇ 18 ರಂದು ಅಫ್ತಾಬ್ ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲದೇ ಕೊಲೆ ಬಳಿಕ ಆರೋಪಿ ಯುವತಿಯ ದೇಹವನ್ನು ಹರಿತವಾದ ಆಯುಧಗಳಿಂದ 35 ತುಂಡುಗಳನ್ನಾಗಿ ಕತ್ತರಿಸಿದ್ದಾನೆ. ಅವುಗಳನ್ನು ದೆಹಲಿಯ ಬೇರೆ ಬೇರೆ ಪ್ರದೇಶಗಳಲ್ಲಿ ಎಸೆದಿದ್ದಾನೆ. ದೇಹದ ಭಾಗಗಳನ್ನು ಎಸೆಯಲು ಆತ ಪ್ರತಿ ದಿನ ಮುಂಜಾನೆ 2 ಗಂಟೆ ವೇಳೆ ಮನೆಯಿಂದ ಹೊರ ಹೋಗುತ್ತಿದ್ದ. ಆತ ಎಲ್ಲಾ ತುಂಡುಗಳನ್ನು ಎಸೆಯಲು 18 ದಿನಗಳನ್ನು ತೆಗೆದುಕೊಂಡಿದ್ದಾನೆ. ಮಾತ್ರವಲ್ಲದೇ ದೇಹದ ತುಂಡುಗಳನ್ನು ಇಡಲು ಆತ ಫ್ರಿಡ್ಜ್ ಅನ್ನು ಖರೀದಿಸಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ಕೆಲ ದಿನಗಳ ಬಳಿಕ ಶ್ರದ್ಧಾ ತನ್ನ ಕುಟುಂಬದವರ ಫೋನ್ ಕರೆಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದ್ದರಿಂದ ಆಕೆಯ ತಂದೆ ವಿಕಾಸ್ ಮದನ್ ನವೆಂಬರ್ 8 ರಂದು ಆಕೆಯನ್ನು ನೋಡಲು ದೆಹಲಿಗೆ ತೆರಳಿದ್ದರು. ಅವರಿದ್ದ ಫ್ಲಾಟ್ ಲಾಕ್ ಆಗಿದ್ದರಿಂದ ಬಳಿಕ ಅವರು ಪೊಲೀಸರನ್ನು ಸಂಪರ್ಕಿಸಿ, ಅಪಹರಣದ ಆರೋಪದ ಮೇಲೆ ದೂರು ದಾಖಲಿಸಿದರು. ಯುವತಿಯ ತಂದೆಯ ದೂರಿನ ಆಧಾರದ ಮೇಲೆ ಪೊಲೀಸರು ಪೂನಾವಾಲಾನನ್ನು ಶನಿವಾರ ಬಂಧಿಸಿದ್ದಾರೆ. ಬಳಿಕ ನಡೆದ ಘಟನೆಯನ್ನೆಲ್ಲಾ ಆತ ಬಾಯಿಬಿಟ್ಟಿದ್ದಾನೆ. ಇದೀಗ ಪೊಲೀಸರು ಆತನ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು, ಶ್ರದ್ಧಾ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.