ಕಲಬುರಗಿ : ದುಷ್ಕರ್ಮಿಗಳು ಬಿಜೆಪಿ ಮುಖಂಡನನ ಮರ್ಮಾಂಗಕ್ಕೆ ಚಾಕು ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ಸೇಡಂ ಪಟ್ಟಣದಲ್ಲಿ ನಡೆದಿದೆ.
ಮೃತರನ್ನು ಮಲ್ಲಿಕಾರ್ಜುನ್ ಮುತ್ಯಾಲ (64) ಎಂದು ಗುರುತಿಸಲಾಗಿದೆ. ಕೋಲಿ ಕಬ್ಬಲಿಗ ಸಮಾಜದ ತಾಲೂಕು ಘಟಕದ ಮುಖಂಡರಾಗಿದ್ದ ಮಲ್ಲಿಕಾರ್ಜುನ್, ಸೇಡಂ ಪಟ್ಟಣದಲ್ಲಿ ವಿಷ್ಣು ಹೆಸರಿನಲ್ಲಿ ಎಲೆಕ್ಟ್ರಾನಿಕ್ ಅಂಗಡಿ ಹೊಂದಿದ್ದರು. ನಿತ್ಯ ರಾತ್ರಿ ಅಂಗಡಿಯಲ್ಲಿಯೇ ಮಲಗುತ್ತಿದ್ದರು. ಎಂದಿನಂತೆ ನಿನ್ನೆ ರಾತ್ರಿ ಅಂಗಡಿಯಲ್ಲಿ ಮಲಗಿದ್ದಾಗ ನುಗ್ಗಿದ ದುಷ್ಕರ್ಮಿಗಳು ಮರ್ಮಾಂಗಕ್ಕೆ ಚಾಕು ಇರಿದು ಬಳಿಕ ಕುತ್ತಿಗೆ ಹಗ್ಗ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಕೊಲೆಯಾದ ಮಲ್ಲಿಕಾರ್ಜುನ್ ಮುತ್ಯಾಲ ಈ ಮುಂಚೆ ಜೆಡಿಎಸ್ ನಲ್ಲಿದ್ದರು. ಇತ್ತೀಚೆಗಷ್ಟೆ ಜೆಡಿಎಸ್ ತೊರೆದು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ನಿನ್ನೆ ಸಿಎಂ ಬೊಮ್ಮಾಯಿ ಪಾಲ್ಗೊಂಡಿದ್ದ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದರು. ಕೊಲೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ಸುದ್ದಿ ತಿಳಿಯುತ್ತಲೇ ಸೇಡಂ ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.










