ನಿನ್ನೆ ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಮೂವರು ವಿದ್ಯಾರ್ಥಿಗಳು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಮಾರತಹಳ್ಳಿ ಠಾಣೆ ಪೊಲೀಸರು ಮೂವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಮಾಷೆ ಮಾಡಲು ಹೀಗೆ ಮಾಡಿದ್ದೇವೆ ಎಂದಿದ್ದಾರೆ. ಆದರೂ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸುತ್ತಿದ್ದಾರೆ. ಇದೀಗ ನಟ ಚೇತನ್ ಅಹಿಂಸಾ ಈ ವಿದ್ಯಾರ್ಥಿಗಳ ಪರ ಧ್ವನಿ ಎತ್ತಿದ್ದಾರೆ.
ಈ ಕುರಿತು ಚೇತನ್ ಟ್ವಿಟ್ ಮಾಡಿದ್ದು, ನಿನ್ನೆ ನಡೆದ ಕಾಲೇಜು ಫೇಸ್ಟ್ ನಲ್ಲಿ ಬೆಂಗಳೂರಿನ 3 ವಿದ್ಯಾರ್ಥಿಗಳು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಇದನ್ನು ವಿನೋದಕ್ಕಾಗಿ ಮಾಡಲಾಗಿದೆ. ಈ ಕಾರಣಕ್ಕಾಗಿ ಆರ್ಯನ್, ರಿಯಾ ಮತ್ತು ದಿನಕರ್ ಅವರನ್ನು ಥಳಿಸಿ ಬೆದರಿಸಿ ಮತ್ತು ಪೊಲೀಸ್ ಕಸ್ಟಡಿಗೆ ತಗೆದುಕೊಳ್ಳಲಾಗಿದೆ. ಇದು ಅಸಂಬಂಧ ಮತ್ತು ಅಪಾಯಕಾರಿ.
ಪಾಕಿಸ್ತಾನದ ಜನರು ನಮ್ಮ ಸಹೋದರಿಯರು ಮತ್ತು ಸಹೋದರರು ಶತ್ರುಗಳಲ್ಲ. ವಿದ್ಯಾರ್ಥಿಗಳನ್ನು ಥಳಿಸಿ ಬೆದರಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದು ಅಪಾಯಕಾರಿ. ಪಾಕಿಸ್ತಾನ ಕ್ಕೆ ಜೈಕಾರ ಹಾಕೋದು ವಾಕ್ ಸ್ವಾತಂತ್ರ್ಯ ಎಂದು ಚೇತನ್ ವಿವಾದಾತ್ಮಕ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ಸಾಕಷ್ಟು ವೈರಲ್ ಕೂಡ ಆಗಿದ್ದು, ಸಾರ್ವಜನಿಕರಿಂದ ತೀರ್ವ ಟೀಕೆಗೆ ಒಳಗಾಗುತ್ತಿದ್ದಾರೆ.










