ಅಭ್ಯರ್ಥಿ ಘೋಷಿಸುವ ಹಕ್ಕು ನನಗಾಗಲಿ ಸಿದ್ದರಾಮಯ್ಯಗಾಗಲಿ ಇಲ್ಲ : ಡಿ.ಕೆ.ಶಿವಕುಮಾರ್.

75
firstsuddi

ಬೆಂಗಳೂರು : ಅಭ್ಯರ್ಥಿಗಳನ್ನು ಘೋಷಿಸುವ ಹಕ್ಕು ಸಿದ್ದರಾಮಯ್ಯ ಅವರಿಗಾಗಲಿ, ನನಗಾಗಲಿ ಇಲ್ಲ. ಎಐಸಿಸಿಗೆ ಮಾತ್ರ ಅಭ್ಯರ್ಥಿಗಳ ಘೋಷಣೆ ಮಾಡುವ ಹಕ್ಕಿದೆ ಎಂದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸ್ಪಷ್ಟಪಡಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊಪ್ಪಳ ಜಿಲ್ಲೆಯಲ್ಲಿ ಕಾಂಗ್ರೆಸ್ ಉಮೇದುವಾರರನ್ನು ಸಿದ್ದರಾಮಯ್ಯ ಘೋಷಿಸಿರುವ ಸಂದರ್ಭದ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಬಹುಶಃ ಹಿರಿಯರಿಗೆ ಪ್ರೋತ್ಸಾಹ ನೀಡಲು ಅವರು ಹೀಗೆ ಮಾತನಾಡಿರಬಹುದು. ಆದರೆ ಅಭ್ಯರ್ಥಿಗಳನ್ನು ಘೋಷಿಸುವ ಅಧಿಕಾರವು ಹೈಕಮಾಂಡ್ ಗೆ ಮಾತ್ರವೇ ಇದೆ. ಹೈಕಮಾಂಡ್ ಎಂದರೆ ಖರ್ಗೆ ಎಂದು ಹೇಳಿದರು.

ಮತಪತ್ರ ಅವ್ಯವಹಾರ ಕುರಿತು ಪ್ರತಿಕ್ರಿಯಿಸಿದ ಅವರು, ಈ ಹಗರಣದಲ್ಲಿ ಸಾಕಷ್ಟು ಜನರು ಇದ್ದಾರೆ. ಮತಗಳ ಖರೀದಿಗೆ, ಮಾರ್ಪಡಿಸಲು ಎಷ್ಟು ದರ ನಿಗದಿಯಾಗಿದೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಇದು ಸಾರ್ವಜನಿಕ ಆಸ್ತಿ. ಸಂಗ್ರಹಿಸಿದ ಮಾಹಿತಿಯನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಗಮನಿಸಿದ ನಂತರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಈ ಪ್ರಕರಣದ ಬಗ್ಗೆ ಚುನಾವಣಾ ಆಯೋಗವು ಪರಿಶೀಲಿಸಬೇಕು ಎಂದು ಕೋರಿದ್ದೇವೆ. ಅಕ್ರಮ ಎಸಗಿದ ಸಂಸ್ಥೆಯು ಮ್ಯಾಪಿಂಗ್ ಹೇಗೆ ಮಾಡುತ್ತಿದ್ದರು. ಅದಕ್ಕೆ ಅನುಮತಿ ಇತ್ತೆ?  ಎಂದು ಡಿಕೆಶಿ ಪ್ರಶ್ನಿಸಿದರು.

ಈ ಹಗರಣದಲ್ಲಿ ಹಲವು ಶಾಸಕರು, ಸಚಿವರು ಶಾಮೀಲಾಗಿದ್ದಾರೆ. ಅದರ ಬಗ್ಗೆ ಮಾಹಿತಿ ನಮ್ಮ ಬಳಿಯಿದೆ. ಮಹದೇವಪುರ ಸೇರಿದಂತೆ ಬೆಂಗಳೂರಿನ ಎಲ್ಲ 28 ಕ್ಷೇತ್ರಗಳ ಎಆರ್ ಒಗಳ ಮೇಲೆ ಕೇಸ್ ಹಾಕಬೇಕಿದೆ. ಪೊಲೀಸರು ಏನು ಮಾಡುತ್ತಾರೆ ಎನ್ನುವುದನ್ನು ನಾವು ಗಮನಿಸುತ್ತಿದ್ದೇವೆ. ಈ ಹಿಂದೆ ರಾಜ್ಯ ಸರ್ಕಾರವು ಹಗರಣಗಳನ್ನು ಹೇಗೆ ನಿರ್ವಹಿಸಿದೆ ಎಂಬುದನ್ನು ಗಮನಿಸಿದ್ದೇವೆ. ಪೊಲೀಸರು ತನಿಖೆ ಪೂರ್ಣಗೊಳಿಸುವ ಮೊದಲೇ ಮುಖ್ಯಮಂತ್ರಿ ಆರೋಪಿಗಳನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಈ ಹಗರಣದ ವಿಚಾರದಲ್ಲಿಯೂ ನಮಗೆ ಅನುಮಾನವಿದೆ. ಮತಪತ್ರಗಳ ಹಗರಣದ ಬಗ್ಗೆ 2013ರಿಂದಲೂ ತನಿಖೆ ಮಾಡಿಸುತ್ತೇವೆ ಎಂದು ಮುಖ್ಯಮಂತ್ರಿ ಹೇಳಿರುವುದನ್ನು ನಾವು ಸ್ವಾಗತಿಸುತ್ತೇವೆ. ನಾವು ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ ಎಂದು ಹೇಳಿದರು.