ಚಿಕ್ಕಮಗಳೂರು : ನರಸಿಂಹರಾಜಪುರ ತಾಲ್ಲೂಕಿನ ಬಾಳೆಕೊಪ್ಪದಲ್ಲಿ ವಾಸವಿರುವ ಬೋವಿ ಜನಾಂಗದ ಕುಟುಂಬಗಳಿಗೆ ಜಾತಿ ಪ್ರಮಾಣ ಪತ್ರ ನೀಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಬಾಳೆಕೊಪ್ಪದಿಂದ ಆಗಮಿಸಿದ್ದ ಬೋವಿ ಸಮುದಾಯದವರೊಂದಿಗೆ ಇಂದು ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ ಅವರನ್ನು ಭೇಟಿ ಮಾಡಿದ ಸಮಿತಿಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಎನ್.ಆರ್.ಪುರ ತಾಲ್ಲೂಕಿನ ಬಾಳೆಕೊಪ್ಪದಲ್ಲಿ ಬೋವಿ ಸಮುದಾಯದ 80 ಜನ ಕಳೆದ 40-50 ವರ್ಷಗಳಿಂದ ವಾಸವಿದ್ದು, ಅವರೆಲ್ಲರೂ ಬಡ ಕೂಲಿ ಕಾರ್ಮಿಕರಾಗಿದ್ದಾರೆ, ವಾಸಕ್ಕೆ ಸ್ವಂತ ಮನೆಯಿಲ್ಲದೆ ಗುಡಿಸಲು ನಿರ್ಮಿಸಿಕೊಂಡು ಬದುಕುತಿದ್ದಾರೆ ಎಂದು ಹೇಳಿದರು.
ಈ ಕುಟುಂಬಗಳ ಬಳಿ ಜಾತಿ ಪ್ರಮಾಣ ಪತ್ರ ಇಲ್ಲದಿರುವುದರಿಂದಾಗಿ ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಸರ್ಕಾರದ ಯಾವುದೇ ಸವಲತ್ತು, ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಗುಬ್ಬಿಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬರ್ 108 ರಲ್ಲಿ 1 ಎಕರೆ ಜಾಗ ಆಶ್ರಯ ಮನೆಗಾಗಿ ಮಂಜೂರಾಗಿದ್ದು, ಆ ಸಂಬಂಧ ಗ್ರಾಮ ಪಂಚಾಯಿತಿಗೆ ಅರ್ಜಿ ನೀಡಿದರೆ, ಜಾತಿ ಪ್ರಮಾಣ ಪತ್ರವಿಲ್ಲದಿರುವುದರಿಂದಾಗಿ ಈ ಕುಟುಂಬಗಳಿಗೆ ಭೂಮಿ ನೀಡುತ್ತಿಲ್ಲ ಎಂದರು.
ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯನ್ನು ಈ ಕುಟುಂಬಗಳಿಗೆ 2015-16 ರಲ್ಲಿ ನೀಡಲಾಗಿದ್ದು, ಇದುವರೆಗೂ ಜಾತಿ ಪ್ರಮಾಣ ಪತ್ರ ಮಾತ್ರ ಒದಗಿಸಿಲ್ಲ ಎಂದು ದೂರಿದರು.
ಹಿಂದಿನ ಜಿಲ್ಲಾಧಿಕಾರಿ ಸತ್ಯವತಿ ಅವರು ನರಸಿಂಹರಾಜಪುರ ತಾಲ್ಲೂಕು ಕಛೇರಿಗೆ ಆಗಮಿಸಿದ್ದ ವೇಳೆ ಈ ಕುಟುಂಬಗಳಿಗೆ ಜಾತಿ ಪ್ರಮಾಣ ಪತ್ರ ನೀಡುವಂತೆ ಸಮಿತಿಯಿಂದ ಮನವಿ ಸಲ್ಲಿಸಿದ್ದು, ಅದರ ನಂತರ ಕೇವಲ ಇಬ್ಬರಿಗೆ ಮಾತ್ರ ಪ್ರಮಾಣ ಪತ್ರ ನೀಡಲಾಗಿದೆ ಎಂದು ಆರೋಪಿಸಿದರು.
ಸರ್ಕಾರದಿಂದ ದೊರೆಯುವ ಮೂಲಭೂತ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ ಈ ಕುಟುಂಬಗಳಿಗೆ ಜಾತಿ ಪ್ರಮಾಣ ಪತ್ರವನ್ನು ನೀಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ, ಸಂಘಟನಾ ಸಂಚಾಲಕ ಡಿ.ರಾಮು, ಶೃಂಗೇರಿ ಕ್ಷೇತ್ರ ಪ್ರಧಾನ ಸಂಚಾಲಕ ಎಸ್.ಹನುಮಂತ, ತಾಲ್ಲೂಕು ಸಂಚಾಲಕ ಯು.ಸಿ.ರಮೇಶ್, ಮೂಡಿಗೆರೆ ತಾಲ್ಲೂಕು ಸಂಚಾಲಕ ಸಂತೋಷ್, ಮಹಿಳಾ ಸಂಚಾಲಕಿ ಆಶಾ, ಅಜ್ಜಂಪುರ ತಾಲ್ಲೂಕು ಸಂಚಾಲಕ ನಾಗರಾಜು, ಕೊಪ್ಪ ತಾಲ್ಲೂಕು ಸಂಚಾಲಕ ಕೆ.ಎಸ್.ರವಿ ಹಾಜರಿದ್ದರು.










