ನವದೆಹಲಿ : ನಾಳೆ ಸುಪ್ರೀಂ ಕೋರ್ಟ್ ನಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಚಾರಣೆ ಹಿನ್ನೆಲೆ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ತೆರಳಿದ್ದಾರೆ. ಇಂದು ಬೆಳಗ್ಗೆ ಅವರು ಹಿರಿಯ ವಕೀಲ ಮುಕುಲ್ ರೊಹಟಗಿ ಅವರನ್ನು ಭೇಟಿ ಮಾಡಿ ವಾದ ಮಂಡಿಸುವ ಬಗ್ಗೆ ಚರ್ಚಿಸಿದರು.
ಭೇಟಿ ಬಳಿಕ ಮಾತನಾಡಿದ ಸಿಎಂ, ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಸಂಬಂಧ ಪಟ್ಟ ಹಾಗೆ ಈಗಾಗಲೇ ಎಲ್ಲವನ್ನು ಸಹ ನಮ್ಮ ಅಡ್ವೋಕೇಟ್ ಜನರಲ್ ವಿವರಿಸಿದ್ದಾರೆ. ನಾನು ಗಡಿ ವಿವಾದದ ಕಾನೂನಾತ್ಮಕ ಹಿನ್ನೆಲೆ ಬಗ್ಗೆ ರೋಹಟಗಿ ಅವರಿಗೆ ವಿವರಣೆ ನೀಡಿದ್ದೇನೆ. ನಾಳೆ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡನೆ ಮಾಡಲು ಎಲ್ಲಾ ರೀತಿಯ ಸಿದ್ಧತೆ ನಡೆದಿದೆ ಎಂದು ಅವರು ನಮಗೆ ತಿಳಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಹಾಕಿರುವ ಅರ್ಜಿಯ ಸಿಂಧುತ್ವ ಕುರಿತಾಗಿ ವಿಚಾರಣೆ ನಡೆಯಲಿದೆ. ಹಿಂದಿನ ಸಿಜೆಐ ದೀಪಕ್ ಮಿಶ್ರಾ ಅವರು ಇದರ ಸಿಂಧುತ್ವದ ವಿಚಾರವನ್ನು ಸಿದ್ಧಪಡಿಸಿದ್ದರು. ಅದಕ್ಕೆ ನಮ್ಮ ಪ್ರತಿರೋಧ ಹೇಗಿರಬೇಕು ಎಂಬುದರ ಬಗ್ಗೆ ನಾವು ಸಿದ್ದರಾಗಿದ್ದೇವೆ. ರೋಹಟಗಿ ಕರ್ನಾಟಕ ಪರವಾಗಿ ಸಮರ್ಥವಾಗಿ ವಾದ ಮಂಡಿಸುವ ಭರವಸೆಯಿದೆ ಎಂದರು.
ರಾಜ್ಯದ ಸಾರಿಗೆ ಸಂಸ್ಥೆ ಬಸ್ ಮೇಲೆ ದಾಳಿ ವಿಚಾರ ಬಗ್ಗೆ ಮಾತನಾಡಿ, ಮಹಾರಾಷ್ಟ್ರ ಗೃಹ ಇಲಾಖೆ ಜೊತೆಗೆ ರಾಜ್ಯದ ಅಧಿಕಾರಿಗಳು ಮಾತನಾಡಿದ್ದಾರೆ. ಈಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಜತ್ ತಾಲೂಕಿನ 42 ಗ್ರಾಮಸ್ಥರು ಹಿಂದಿನಿಂದ ಕರ್ನಾಟಕ ಸೇರಲು ಬಯಸಿದ್ದಾರೆ. ಸರಿಯಾದ ಸೌಲಭ್ಯ ದೊರಕದ ಹಿನ್ನೆಲೆ ಅವರು ಈ ಹೇಳಿಕೆ ಬಹಳಷ್ಟು ವರ್ಷದಿಂದ ನೀಡುತ್ತಿದ್ದಾರೆ. ಆದರೆ ಈ ಎಲ್ಲಾ ವಿಚಾರ ಸುಪ್ರೀಂ ಕೋರ್ಟ್ ನಲ್ಲಿದೆ. ನಾನು ಸರ್ವ ಪಕ್ಷ ಸಭೆ ಕರೆದು ಚರ್ಚೆ ಮಾಡುತ್ತೇನೆ ಎಂದರು
ಕಾಂಗ್ರೆಸ್ ನಲ್ಲಿ ಎಷ್ಟು ಜನ ರೌಡಿಶೀಟರ್ ಗಳಿದ್ದಾರೆ ಅಂತ ಮೊದಲು ಲೆಕ್ಕ ಹಾಕಲಿ, ಬಳಿಕ ಬಿಜೆಪಿ ಬಗ್ಗೆ ಮಾತನಾಡಲಿ ಎಂದು ರೌಡಿಶೀಟರ್ ಸೈಲೆಂಟ್ ಸುನೀಲ ಜೊತೆಗೆ ಬಿಜೆಪಿ ನಾಯಕರು ವೇದಿಕೆ ಹಂಚಿಕೊಂಡಿದ್ದನ್ನು ಸಮರ್ಥಿಸಿಕೊಂಡರು.










