ಮೂಡಿಗೆರೆ : ಕಡಿದಾಳ್ ಗ್ರಾಮದಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಉದ್ಘಾಟನೆ…

104
firstsuddi

ಮೂಡಿಗೆರೆ : ತಾಲೂಕಿನ ಕಡಿದಾಳ್ ಗ್ರಾಮದಲ್ಲಿ ಗ್ರಾಮೀಣ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಇಂದು ಕಡಿದಾಳು ಗ್ರಾಮದ ಕೆ.ಬಿ. ಲಕ್ಷ್ಮಣಗೌಡ ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು.

ಕ್ರೀಡಾಕೂಟವನ್ನು ಭಾರತ ರತ್ನ ಅಂಬೇಡ್ಕರ್ ಮತ್ತು ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ದೀಪ ಬೆಳಗುವುದರ ಮೂಲಕ ಕೆಂಪೇಗೌಡ ಒಕ್ಕಲಿಗ ವೇದಿಕೆ ಅಧ್ಯಕ್ಷರಾದ ಬ್ರಿಜೇಶ್ ಕಡಿದಾಳ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮೊಬೈಲ್ ಮತ್ತು ಟಿವಿ ಮಾಧ್ಯಮದ ಪ್ರಭಾವದಿಂದ ಕ್ರೀಡೆಗಳು ನಶಿಸಿ ಹೋಗುತ್ತಿರುವ ಕಾಲಘಟ್ಟದಲ್ಲಿ ಇಂಥ ಕ್ರೀಡಾಕೂಟವು ಗ್ರಾಮೀಣ ಭಾಗದಲ್ಲಿ ಅಗತ್ಯವಿದೆ. ಇನ್ನು ಕ್ರೀಡಾಪಟುಗಳು ಸೋಲು ಗೆಲುವನ್ನು ಸಮಾನಾಗಿ ಸ್ವೀಕರಿಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಪತ್ರಕರ್ತ ಪುನೀತ್ ಕಡಿದಾಳ್ ಜಾತೀಯತೆಯನ್ನು ಹೋಗಲಾಡಿಸುವ ದೊಡ್ಡ ಶಕ್ತಿ ಕ್ರೀಡೆಗೆ ಇದೆ. ಕ್ರೀಡೆಯಿಂದ ಅತಿ ಹೆಚ್ಚು ಸ್ನೇಹಿತರೂ ನಮ್ಮ ಬದುಕಿನಲ್ಲಿ ಸಿಗುತ್ತಾರೆ. ಹಲವಾರು ಕ್ರೀಡಾಕೂಟಗಳಲ್ಲಿ ಭಾಗಿಯಾದ ಅನುಭವ ಹಂಚಿಕೊಳ್ಳುವುದರ ಮೂಲಕ ಗೆದ್ದವರು ಹಿಗ್ಗದೆ, ಸೋತವರು ಕುಗ್ಗದೆ ಮುಂದಿನ ಕ್ರೀಡಾಕೂಟದಲ್ಲಿ ಗೆಲುವಿನ ಮಂತ್ರ ಪಠಣೆ ಮಾಡುವಂತೆ ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.

ಕ್ರೀಡಾಕೂಟದ ಆಯೋಜಕರಾದ ರಾಕೇಶ್ ಮಾತನಾಡಿ ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದರು. ಕ್ರೀಡಾಕೂಟದಲ್ಲಿ ಏರುಪೇರುಗಳಿದ್ದಲ್ಲಿ ಕ್ರೀಡಾಪಟುಗಳು ಹೊಂದಿಕೊಂಡು ಹೋಗಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ, ಸಂಜಯ್ ಗೌಡ, ಹೇಮಾ, ತೀರ್ಪುಗಾರಾದ ಉಮೇಶ್, ಪೂರ್ಣೇಶ್ ಸೇರಿದಂತೆ ಗ್ರಾಮಸ್ಥರು ಇದ್ದರು.