ಅಶ್ಲೀಲ ವೀಡಿಯೋ ಹಂಚಿದ ಆರೋಪದ ಹಿನ್ನೆಲೆಯಲ್ಲಿ ದಾಖಲಾದ ಎಫ್‍ಐಆರ್ ಗೆ ಸಂಬಂಧಿಸಿದಂತೆ ಉದ್ಯಮಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರಿಗೆ ಇಂದು ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ನಟಿಯರಾದ ಶೆರ್ಲಿನಾ ಚೋಪ್ರಾ ಮತ್ತು ಪೂನಂ ಪಾಂಡೆಗೂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ ಮತ್ತು ಕೆ.ಎಂ. ಜೋಸೆಫ್ ಅವರಿದ್ದ ಪೀಠ ಆರೋಪಿಗಳು ತನಿಖೆಗೆ ಸಹಕರಿಸುವಂತೆ ಸೂಚಿಸಿದೆ.
ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ ಹಿರಿಯ ವಕೀಲ ಆರ್.ಬಸಂತ್, ಪ್ರಕರಣದಲ್ಲಿ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಆರೋಪಿಗಳು ತನಿಖೆಗೆ ಪೊಲೀಸರಿಗೆ ಸಹಕರಿಸುತ್ತಿದ್ದಾರೆ. ಹಾಗಾಗಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದ್ದರು. ಅವರ ಮನವಿಯನ್ನು ಕೋರ್ಟ್ ಪುರಸ್ಕರಿಸಿದೆ.
ಕುಂದ್ರಾ ವಿರುದ್ಧ ಭಾರತೀಯ ದಂಡ ಸಂಹಿತೆ, ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ತಡೆಗಟ್ಟುವಿಕೆ) ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಲೈಂಗಿಕವಾಗಿ ಅಶ್ಲೀಲ ವಿಡಿಯೋಗಳನ್ನು ಹಂಚುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಎಫ್ ಐಆರ್ ನಲ್ಲಿ ಚೋಪ್ರಾ ಮತ್ತು ಪಾಂಡೆಯನ್ನು ಸಹ ಆರೋಪಿಗಳೆಂದು ಹೆಸರಿಸಲಾಗಿತ್ತು. ಸಹ-ಆರೋಪಿಗಳೆಂದು ಹೆಸರಿಸಲಾದ ನಟಿಯರು ವಿಡಿಯೋಗಳನ್ನು ಚಿತ್ರೀಕರಿಸಲು ಸಂಪೂರ್ಣ ಸಮ್ಮತಿಯನ್ನು ನೀಡಿದ್ದರೂ ಸಹ, ವಿಡಿಯೋಗಳ ಪ್ರಸಾರಕ್ಕೆ ಅನುಮತಿ ನೀಡಿಲ್ಲ ಎಂದು ಕುಂದ್ರಾ ಅವರ ವಕೀಲರು ಪ್ರತಿಪಾದಿಸಿದರು.










