ಹಾಸ್ಟೆಲ್ ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ – ಕಾಮುಕ ಶಿಕ್ಷಕನಿಗೆ ಬಿತ್ತು ಧರ್ಮದೇಟು…

73
firstsuddi

ಮಂಡ್ಯ : ಅಸಭ್ಯ ವರ್ತನೆ ತೋರಿದ ಮುಖ್ಯ ಶಿಕ್ಷಕನಿಗೆ ವಿದ್ಯಾರ್ಥಿನಿಯರೆಲ್ಲ ಸೇರಿ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಕಟ್ಟೇರಿ ಗ್ರಾಮದಲ್ಲಿ ನಡೆದಿದೆ.

ಪ್ರೌಢ ಶಾಲೆಯೊಂದರ ಮುಖ್ಯಶಿಕ್ಷಕನಾಗಿದ್ದ ಚಿನ್ಮಯಮೂರ್ತಿಗೆ ವಿದ್ಯಾರ್ಥಿನಿಯರ ವಸತಿ ನಿಲಯದ ಉಸ್ತುವಾರಿ ನೀಡಲಾಗಿತ್ತು. ನಿತ್ಯ ಸಂಜೆ ಸಮಯದಲ್ಲಿ ಹಾಸ್ಟೆಲ್ ಗೆ ಬರುತ್ತಿದ್ದ ಕಾಮುಕ ಚಿನ್ಮಯಮೂರ್ತಿ, ತನ್ನ ಕೊಠಡಿಗೆ ವಿದ್ಯಾರ್ಥಿನಿಯರನ್ನು ಕರೆಸಿಕೊಂಡು ಅಸಭ್ಯ ವರ್ತನೆ ಮಾಡುತ್ತಿದ್ದ.

ಅಶ್ಲೀಲ ವಿಡಿಯೋ ತೋರಿಸುವ ಜೊತೆಗೆ ಅಂಗಾಂಗ ಮುಟ್ಟಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ. ಯಾರಿಗಾದ್ರೂ ಹೇಳಿದ್ರೆ ಟಿಸಿಯಲ್ಲಿ ಬ್ಯಾಡ್ ಕ್ಯಾರೆಕ್ಟರ್ ಎಂದು ನಮೂದಿಸುವುದಾಗಿ ಬೆದರಿಕೆ ಹಾಕಿದ್ದ. ಇಷ್ಟು ವರ್ಷ ಆತನ ದೌರ್ಜನ್ಯ ಸಹಿಸಿಕೊಂಡು ಬಂದಿದ್ದ ವಿದ್ಯಾರ್ಥಿನಿಯರು ನಿನ್ನೆ ರಾತ್ರಿ ಸಿಡಿದೆದ್ದಿದ್ದಾರೆ.

ನಿನ್ನೆ ರಾತ್ರಿ ವಿದ್ಯಾರ್ಥಿನಿ ಒಬ್ಬಾಕೆಯನ್ನು ಕೊಠಡಿಗೆ ಕರೆಸಿ ದೌರ್ಜನ್ಯ ನಡೆಸಲು ಯತ್ನಿಸಿದ್ದಾನೆ. ಈ ವೇಳೆ ಭಯದಿಂದ ವಿದ್ಯಾರ್ಥಿನಿ ಕೂಗಿಕೊಂಡಾಗ ನೆರವಿಗೆ ಬಂದ ಉಳಿದ ವಿದ್ಯಾರ್ಥಿನಿಯರು ಕಾಮುಕ ಶಿಕ್ಷಕನನ್ನು ಕೊಠಡಿಯಲ್ಲಿ ಕೂಡಿ ಹಾಕಿ ಧರ್ಮದೇಟು ನೀಡಿದ್ದಾರೆ. ಈ ಘಟನೆಯ ವಿಚಾರ ತಿಳಿದು ಗ್ರಾಮಸ್ಥರು ಹಾಸ್ಟೆಲ್ ಬಳಿಗೆ ಬಂದು ಆಕ್ರೋಶ ಹೊರಹಾಕಿದರು. ಬಳಿಕ ಚಿನ್ಮಯಮೂರ್ತಿಯನ್ನು ಕೆಆರ್‌ಎಸ್‌ ಠಾಣೆ ಪೊಲೀಸರು ವಶಕ್ಕೆ ಪಡೆದರು.