ಬಳ್ಳಾರಿ : ಕೆಎಸ್‍ಆರ್‌ಟಿಸಿ ಬಸ್‍ಗೆ ಮೂವರು ವಿದ್ಯಾರ್ಥಿಗಳು ಬಲಿಯಾಗಿರುವ ಘಟನೆ ತಾಲೂಕಿನ ಹಲಕುಂದಿ ಗ್ರಾಮದಲ್ಲಿ ನಡೆದಿದೆ. ಎಮ್ಮಿಗನೂರಿನ ಕನಕರಾಜು (19), ಮುರುಡಿ ಗ್ರಾಮದ ಶಂಕರ (18), ಸಂಡೂರು ತಾಲೂಕಿನ ನಾಗೇನಹಳ್ಳಿ ಹೊನ್ನೂರ (22) ಮೃತ ವಿದ್ಯಾರ್ಥಿಗಳು.
ಮೃತ ಮೂವರು ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿದ್ದು ಓದುತ್ತಾ, ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದರು. ಹೋಟೆಲ್ ಒಂದರಲ್ಲಿ ಕ್ಯಾಟರಿಂಗ್ ಸರ್ವಿಸ್ ಕೆಲಸಕ್ಕೆ ಸೇರಿದ್ದರು. ನಿನ್ನೆ ರಾತ್ರಿ ಬಳ್ಳಾರಿ ಸಮೀಪದ ಹಲಕುಂದಿ ಬಳಿ ಕ್ಯಾಟರಿಂಗ್ ಕೆಲಸಕ್ಕೆ ಹೋಗಿ ವಿದ್ಯಾರ್ಥಿಗಳು ಹಾಸ್ಟೆಲ್ ಗೆ ವಾಪಸ್ ಹೋಗಲು ರಸ್ತೆ ದಾಟುವಾಗ ಕಲಬುರಗಿಗೆ ತೆರಳುತ್ತಿದ್ದ ಕೆಎಸ್‍ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿ ಬಳ್ಳಾರಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನೂ ಘಟನೆಗೆ ಸಂಬಂಧಿಸಿ ವಿಮ್ಸ್ ಆಸ್ಪತ್ರೆಯಲ್ಲಿ ಹೈಡ್ರಾಮಾ ನಡೆದಿದೆ. ಶಾವಾಗಾರದ ಬಳಿ ಬಂದ ಎಸ್ಟಿ ಇಲಾಖೆಯ ಅಧಿಕಾರಿಯನ್ನ ಹಾಸ್ಟೆಲ್ ವಿದ್ಯಾರ್ಥಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಎಸ್ಸಿ ಎಸ್ಟಿ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳಿಗೆ ಕಿರುಕೊಳ ಕೊಡ್ತೀರಿ. ಸಾವಿಗೀಡಾದ ವಿದ್ಯಾರ್ಥಿಗಳು ಎರಡು ದಿನದಿಂದ ಹಾಸ್ಟೆಲ್ ನಲ್ಲಿ ಇಲ್ಲ ಅಂತಾ ಸುಳ್ಳು ಹೇಳ್ತಿರಾ ಎಂದು ಅಕ್ರೋಶ ಹೊರ ಹಾಕಿದ್ದಾರೆ. ಸ್ಥಳಕ್ಕೆ ಬಳ್ಳಾರಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ವಿದ್ಯಾರ್ಥಿಗಳನ್ನು ಸಮಾಧಾನ ಮಾಡಿದರು.










