ರಾಮನಗರದಲ್ಲಿ ಅಯೋಧ್ಯೆ ಮಾದರಿಯಲ್ಲಿ ರಾಮಮಂದಿರ ನಿರ್ಮಾಣ : ಸಚಿವ ಅಶ್ವತ್ಥ್ ನಾರಾಯಣ್.

50
firstsuddi

ಬೆಳಗಾವಿ : ರಾಮನಗರದಲ್ಲಿರುವ ಪ್ರಸಿದ್ಧ ರಾಮ ದೇವರ ಬೆಟ್ಟದಲ್ಲಿ ಅಯೋಧ್ಯೆಯ ರಾಮ ಮಂದಿರದ ಮಾದರಿಯ ದೇವಾಲಯ ನಿರ್ಮಾಣಕ್ಕೆ ಪ್ಲಾನ್ ಮಾಡಲಾಗಿದೆ. ದೇವಸ್ಥಾನ ಅಭಿವೃದ್ಧಿಗೆ ಯೋಜನೆ ರೂಪಿಸಲು ಸಿಎಂ ಸೂಚನೆ ನೀಡಿದ್ದಾರೆ ಎಂದು ಸಚಿವ ಅಶ್ವತ್ಥ್ ನಾರಾಯಣ್ ಹೇಳಿದರು.

ಸುವರ್ಣಸೌಧದಲ್ಲಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ್ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಹೆಸರೇ ರಾಮನಗರವಾಗಿರುವುದರಿಂದ ರಾಮ ಮಂದಿರದ ಅಭಿವೃದ್ಧಿಯಾಗುವುದು ಸೂಕ್ತವಾಗಿದೆ. ಉತ್ತರ ಭಾರತದಂತೆ ದಕ್ಷಿಣ ಭಾರತದಲ್ಲೂ ರಾಮ ಮಂದಿರ ನಿರ್ಮಾಣ ಆಗುತ್ತೆ ವಿಶ್ವಾಸ ಇದೆ. ಬರುವಂತಹ ಬಜೆಟ್ ನಲ್ಲಿ ಸಿಎಂ ಘೋಷಣೆ ಮಾಡಬಹುದು ಎಂದರು.

ರಾಮನಗರದ ರಾಮದೇವರ ಬೆಟ್ಟವನ್ನು ದಕ್ಷಿಣ ಅಯೋಧ್ಯೆ ಕೇಂದ್ರವನ್ನಾಗಿ ಮಾಡುತ್ತೇವೆ. ದೇವಸ್ಥಾನ ಅಭಿವೃದ್ಧಿಗೆ ಯೋಜನೆ ರೂಪಿಸಲು ಮುಖ್ಯಮಂತ್ರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ. ಅಲ್ಲಿರುವ ರಾಮನ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿ, ದಕ್ಷಿಣ ಅಯೋಧ್ಯೆ ಕೇಂದ್ರವನ್ನಾಗಿ ಮಾಡುತ್ತೇವೆ. ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಆಹ್ವಾನಿಸಿದ್ದೇವೆ. ಅಭಿವೃದ್ಧಿಗೆ ಬರುವಂತ ಬಜೆಟ್ ನಲ್ಲಿ ಸಿಎಂ ಹಣ ಘೋಷಣೆ ಮಾಡುತ್ತಾರೆ. ಆ ಮೂಲಕ ರಾಮನಗರದ ರಾಮದೇವರ ಬೆಟ್ಟವನ್ನು ಹಿಂದೂ ಧಾರ್ಮಿಕ ಕೇಂದ್ರವನ್ನಾಗಿ ಮಾಡುತ್ತೇವೆ ಎಂದರು.

ರಾಮನಗರದಲ್ಲಿ ರಾಮದೇವರಬೆಟ್ಟದಲ್ಲಿ ರಾಮ ಮಂದಿರ ನಿರ್ಮಾಣ ವಿಚಾರವಾಗಿ ಸುದ್ದಿಗಾರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ರಾಮನಗರದಲ್ಲಿ ರಾಮ ಮಂದಿರ, ಸೀತೆ ಮಂದಿರ, ಶಿವ ಮಂದಿರವಾದರೂ ಕಟ್ಟಲಿ, ಅಷ್ಟೇ ಯಾಕೆ ಅಶ್ವಥ್ ನಾರಾಯಣನ ಮಂದಿರವಾದರೂ ಕಟ್ಟಲಿ ನಾವೇನೂ ಸಿಟ್ಟಾಗಲ್ಲ ಎಂದು ತಿರುಗೇಟು ನೀಡಿದರು.

ರಾಮನಗರದಲ್ಲಿ ರಾಮ ಮಂದಿರವನ್ನು ಕಟ್ಟಲು ಬೇಡ ಅಂತಾ ಯಾರು ತಡೆದುಕೊಂಡಿದ್ದಾರೆ. ಅವರು ಜಿಲ್ಲಾ ಮಂತ್ರಿ ಇದ್ದಾರೆ? ಅವರನ್ನ ನಾವು ತಡೀತಿವಾ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.