ನವದೆಹಲಿ : ಸರ್ಕಾರಿ ಜಾಹೀರಾತುಗಳ ನೆಪದಲ್ಲಿ ರಾಜಕೀಯ ಜಾಹೀರಾತುಗಳನ್ನು ಪ್ರಕಟಿಸಿದ ಆರೋಪದ ಹಿನ್ನೆಲೆ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) 163.62 ಕೋಟಿ ರೂಪಾಯಿ ಹಿಂದಿರುಗಿಸುವಂತೆ ನೋಟಿಸ್ ನೀಡಲಾಗಿದೆ.
ದೆಹಲಿ ಆಡಳಿತ ಪಕ್ಷವು 10 ದಿನಗಳಲ್ಲಿ ಈ ಮೊತ್ತ ಪಾವತಿಸುವಂತೆ ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯ ನೋಟಿಸ್ ನಲ್ಲಿ ತಾಕೀತು ಮಾಡಿದೆ. ಒಂದು ವೇಳೆ ಎಎಪಿ ಸಂಚಾಲಕರು ಠೇವಣಿ ಇಡಲು ವಿಫಲವಾದಲ್ಲಿ ಕಾನೂನಿನ ಅನ್ವಯ ಪಕ್ಷದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಜೊತೆಗೆ ನಿರ್ದಿಷ್ಟ ಕಾಲಮಿತಿಯಲ್ಲೇ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಸರ್ಕಾರಿ ಜಾಹೀರಾತುಗಳ ನೆಪದಲ್ಲಿ ಪ್ರಕಟಿಸಿದ ರಾಜಕೀಯ ಜಾಹೀರಾತುಗಳಿಗಾಗಿ ಎಎಪಿಯಿಂದ 97 ಕೋಟಿ ರೂಪಾಯಿಗಳನ್ನು ವಸೂಲಿ ಮಾಡುವಂತೆ ಮುಖ್ಯ ಕಾರ್ಯದರ್ಶಿಗೆ ಒಂದು ತಿಂಗಳ ನಂತರ ಈ ಬೆಳವಣಿಗೆ ನಡೆದಿದೆ.
2016ರ ಅವಧಿಯಲ್ಲಿ ಸರ್ಕಾರಿ ಜಾಹೀರಾತಿನ ಹೆಸರಲ್ಲಿ ಪಡೆದ ಹಣವನ್ನು ಕೇಜ್ರಿವಾಲ್ ಸರ್ಕಾರ ರಾಜಕೀಯ ಜಾಹೀರಾತಿಗೆ ಬಳಸಿದೆ ಎನ್ನಲಾಗಿದೆ.










