ತುಮಕೂರು : ಅನಾಥರಾಗಿದ್ದ ಮೂವರು ಸಹೋದರಿಯರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬರಕನಹಾಲ್ ತಾಂಡಾದಲ್ಲಿ ನಡೆದಿದೆ.
ರಂಜಿತಾ(24), ಚಂದನಾ(21 ) ಹಾಗೂ ಬಿಂದು(18) ಆತ್ಮಹತ್ಯೆ ಮಾಡಿಕೊಂಡ ಸಹೋದರಿಯರಾಗಿದ್ದು, ನಿನ್ನೆ ಸಂಜೆ ಪ್ರಕರಣ ಬೆಳಕಿಗೆ ಬಂದಿದೆ.
10 ವರ್ಷಗಳ ಹಿಂದೆಯೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದ ಈ ಸಹೋದರಿಯರು ಅಜ್ಜಿ ಜೊತೆಯಲ್ಲಿ ವಾಸವಿದ್ದರು. ಆದರೆ ಆಸರೆಯಾಗಿದ್ದ ಅಜ್ಜಿಯೂ ಸಹ ಇತ್ತೀಚೆಗೆ ಮರಣ ಹೊಂದಿದ್ದರು. ಬಳಿಕ ಸಹೋದರಿಯರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಈ ಮೂವರು ಸಹೋದರಿಯರ ಪೈಕಿ ಇಬ್ಬರು ಕಿಬ್ಬನಹಳ್ಳಿಯ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಸಹೋದರಿಯರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಎಎಸ್‌ಪಿ ಸಿದ್ದಾರ್ಥ್ ಗೋಯೆಲ್, ಸಿಪಿಐ ನಿರ್ಮಲಾ, ಪಿಎಸ್ಐ ಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










